March 4, 2026
Wednesday, March 4, 2026
spot_img

ವಿದ್ಯಾನಗರಿಯ ರಸ್ತೆಗಳಲ್ಲಿ ರಂಗೇರಿದ ಹೋಳಿ, ಈ ಬಾರಿ ಆರ್ಗಾನಿಕ್‌ ಕಲರ್ಸ್‌ ಬಳಕೆ

ಹೊಸದಿಗಂತ ವರದಿ ಧಾರವಾಡ:

ವಿದ್ಯಾನಗರಿ ಧಾರವಾಡದಲ್ಲಿ ಕಾಮನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಾಂಸ್ಕೃತಿಕ ನಗರಿಯ ಬೀದಿ ಬೀದಿಗಳಲ್ಲಿ ಇಂದು ಬಣ್ಣದ ಓಕಳಿ ಅದ್ಧೂರಿಯಾಗಿ ರಂಗೇರಿದ್ದು, ಸಣ್ಣವರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಣ್ಣದಾಟದಲ್ಲಿ ಮಿಂದೆದ್ದರು.

ಬೆಳಿಗ್ಗೆಯಿಂದ ಯುವಕರು ಕೈಯಲ್ಲಿ ಬಣ್ಣದ ಬಟ್ಟಲು ಹಿಡಿದು ‘ಹೋಳಿ ಹೈ’ ಎನ್ನುತ್ತಾ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸಿದರು. ನಗರದ ಸುಭಾಷ್ ರೋಡ್, ಲೈನ್ ಬಜಾರ್ ಹಾಗೂ ವಿದ್ಯಾನಗರದ ಗಲ್ಲಿಗಳಲ್ಲಿ ಯುವಕರ ಟೋಳಿಗಳು ಬಣ್ಣದ ಮಳೆಯಲ್ಲಿ ಮಿಂದು ಸಂಭ್ರಮಿಸಿದವು.

ಡಿಜೆ ಸದ್ದು, ಕುಣಿತದ ಅಬ್ಬರ:

ನಗರದ ಸುಭಾಷ ರಸ್ತೆ, ಸಂಗಮ ಸರ್ಕಲ್, ಜಯನಗರ ಕ್ರಾಸ್, ಶಿವಾಜಿ ವೃತ್ತ, ಎಲ್.ಐ.ಸಿ ಸೇರಿ ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ ಬೃಹತ್ ಡಿಜೆ ಸೌಂಡ್ ಸಿಸ್ಟಮ್‌ಗಳಿಗೆ ಯುವಕ-ಯುವತಿಯರು ಭರ್ಜರಿ ಸ್ಟೆಪ್ಸ್ ಹಾಕಿದರು. ಜಾನಪದ ಹಾಡುಗಳು, ಕನ್ನಡ, ಹಿಂದಿ, ತೆಲಗು ಚಿತ್ರಗೀತೆಗಳು, ಹಾಗೂ ಫಾಸ್ಟ್ ಬೀಟ್ ಹಾಡುಗಳಿಗೆ ಇಡೀ ನಗರವೇ ಹೆಜ್ಜೆ ಹಾಕಿತು.

ಬಿಗಿ ಪೊಲೀಸ್ ಬಂದೋಬಸ್ತ್:

ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕೆಪಿಇಎಸ್ ಕಾಲೇಜು ರಸ್ತೆ ಹಾಗೂ ಮಾಳಮಡ್ಡಿ ಭಾಗಗಳಲ್ಲಿ ವಿಶೇಷ ನಿಗಾ ವಹಿಸಲಾಗಿತ್ತು ಧಾರವಾಡದ ಹೋಳಿ ಅಂದರೆ ಅದು ಬರೀ ಬಣ್ಣದ ಆಟವಲ್ಲ, ಅದೊಂದು ಭಾವನೆ. ಎಲ್ಲರೂ ಜಾತಿ-ಮತ ಮರೆತು ಒಂದಾಗಿ ಸಂಭ್ರಮಿಸುವ ಈ ದಿನ ವರ್ಷದ ಅತ್ಯಂತ ಸುಂದರ ದಿನ, ಎಂದು ಸ್ಥಳೀಯ ನಿವಾಸಿ ಮಂಜುನಾಥ ಭಜಂತ್ರಿ ಹರ್ಷ ವ್ಯಕ್ತಪಡಿಸಿದರು.

ಪರಿಸರ ಸ್ನೇಹಿ ಹೋಳಿ
ವಿಶೇಷವೆಂದರೆ, ಈ ಬಾರಿ ಅನೇಕ ಕಡೆಗಳಲ್ಲಿ ನೈಸರ್ಗಿಕ ಬಣ್ಣಗಳನ್ನು (Organic Colors) ಬಳಸುವ ಮೂಲಕ ಪರಿಸರ ಪ್ರೇಮ ಮೆರೆಯಲಾಯಿತು. ರಾಸಾಯನಿಕ ಮುಕ್ತ ಬಣ್ಣಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಈ ಬಾರಿಯ ವಿಶೇಷವಾಗಿತ್ತು. ಒಟ್ಟಾರೆಯಾಗಿ, ಧಾರವಾಡದಲ್ಲಿ ಈ ಬಾರಿಯ ಬಣ್ಣದ ಓಕಳಿ ಶಾಂತಿಯುತವಾಗಿ ಮತ್ತು ಅತ್ಯಂತ ಸಡಗರದಿಂದ ಜರುಗಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !