ಹೊಸದಿಗಂತ ವರದಿ ಮಂಗಳೂರು:
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಹೊಲದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಸುತ್ತುಮತ್ತ ಹರಡಿ ಆತಂಕ ಸೃಷ್ಠಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೈಕಂಬದ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿಯ ಕೆಳಗಿನ ಬಾಕಿಮಾರು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದ್ದು, ಸ್ಥಳೀಯ ಯುವಕರಸಮಯಪ್ರಜ್ಞೆಯಿಂದಾಗಿ ಪಕ್ಕದ ಮನೆಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ಮಧ್ಯಾಹ್ನ ಒಂದೂವರೆ ಗಂಟೆ ಸುಮಾರಿಗೆ ಹೊಲದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಗದ್ದೆಯಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹರಡಿದೆ. ಬಿಸಿಲಿಗೆ ಒಣಗಿದ್ದ ಹುಲ್ಲಿಗೆ ತಗುಲಿದ್ದ ಬೆಂಕಿ ಗಾಳಿಗೆ ವ್ಯಾಪಕವಾಗಿ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿತ್ತು.

ಹಲವು ಹೊಲಗಳಿಗೆ ವ್ಯಾಪಿಸಿದ ಬೆಂಕಿ ಪಕ್ಕದ ಗುಡ್ಡಕ್ಕೂ ಹತ್ತಿಕೊಂಡಿತ್ತು.
ಹೊಲದ ಪಕ್ಕದಲ್ಲಿದ್ದ ಯುವಕ ಮಂಡಲದ ಕಟ್ಟಡ ಮತ್ತು ಮನೆಗಳಿಗೂ ಬೆಂಕಿ ತಗಳುವ ಭೀತಿ ಎದುರಾಗಿತ್ತು.
ತಕ್ಷಣ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿ ಸ್ಥಳೀಯ ಯುವಕರು, ಮಹಿಳೆಯ ಮತ್ತು ಗಂಜಿಮಠ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರು ಕೈಗೆ ಸಿಕ್ಕ ವಸ್ತುಗಳಿಂದ ಬೆಂಕಿ ಹರಡುವುದನ್ನು ಹರ ಸಾಹಸದಿಂದ ತಡೆದರು ಸುಮಾರು ಒಂದೂವರೆ ತಾಸುಗಳ ಸ್ಥಳೀಯರ ಸತತ ಪ್ರಯತ್ನದಿಂದ ಬೆಂಕಿ ಹತೋಟಿಗೆ ಬಂದಿದೆ.
ಇಲ್ಲಿ ಹೈ ಟೆನ್ಶನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಇದರಿಂದ ಅಥವಾ ಇಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಬಿದ್ದ ಕಿಡಿಯಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.



