ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿ ಸಂಸತ್ತಿನ ಮೇಲ್ಮನೆಗೆ (ರಾಜ್ಯಸಭೆ) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಪಕ್ಷದ ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ರಾಜ್ಯಸಭಾ ಪ್ರವೇಶಕ್ಕಾಗಿ ನಾಮಪತ್ರಗಳನ್ನು ಸಿದ್ಧಪಡಿಸಲಾಗಿದ್ದು, ಮಾರ್ಚ್ 5ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತ ನಿತೀಶ್ ಕುಮಾರ್ ರಾಜ್ಯಸಭೆಯತ್ತ ಕಾಲಿಟ್ಟರೆ, ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲಿದೆ. ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲು ಸಾಧ್ಯತೆವಿದೆ.
ಈ ವದಂತಿಗಳ ನಡುವೆಯೇ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಅವರು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಲಲನ್ ಸಿಂಗ್ ಅವರು ನಾಳೆ ಬೆಳಗ್ಗೆ ದೆಹಲಿಯಿಂದ ಪಾಟ್ನಾಗೆ ಆಗಮಿಸುತ್ತಿರುವುದು, ಪಕ್ಷದೊಳಗಿನ ರಾಜಕೀಯ ಚರ್ಚೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.
ಜೆಡಿಯುಯಿಂದ ರಾಜ್ಯಸಭೆಗೆ ರಾಮನಾಥ್ ಠಾಕೂರ್ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದರೂ, ಎರಡನೇ ಅಭ್ಯರ್ಥಿಯ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಇದರಿಂದಾಗಿ ತೀವ್ರ ಕುತೂಹಲ ಮುಂದುವರಿದಿದೆ.
ಈ ಕುರಿತು ಪಕ್ಷದ ನಾಯಕತ್ವದಿಂದ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಬಿಹಾರದ ರಾಜಕೀಯವು ಮಹತ್ವದ ತಿರುವು ಪಡೆಯಲು ಸಜ್ಜಾಗಿರುವುದು ಸ್ಪಷ್ಟವಾಗಿದೆ.
ನಿತೀಶ್ ಕುಮಾರ್ ಈ ಹಿಂದೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2015ರಿಂದ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್, ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ.



