March 4, 2026
Wednesday, March 4, 2026
spot_img

ಬೆಳಗಾವಿ ಪಾಲಿಕೆ ಸದಸ್ಯರಿಗೆ ಬಿಗ್ ರಿಲೀಫ್: ಅನರ್ಹತೆ ನಿರ್ಧಾರಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ಬೆಳಗಾವಿ:

ಮಹಾನಗರ ಪಾಲಿಕೆಯ ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಕಾನೂನು ಸ್ಪಷ್ಟನೆಯನ್ನು ನೀಡಿದೆ. ಆಸ್ತಿ ವಿವರ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ನಗರಾಯುಕ್ತರಿಗೆ (ಕಮಿಷನರ್) ಇಲ್ಲ ಎಂದು ನ್ಯಾಯಾಲಯ ಸಾರಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಅಥವಾ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಅವರ ಅನರ್ಹತೆಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ನಗರಾಯುಕ್ತರು ತಾವೇ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಪಾಲಿಕೆ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:

ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯ ಪ್ರಕಾರ, ಕೌನ್ಸಿಲರ್‌ಗಳ ಅನರ್ಹತೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆ.

ನಗರಸಭೆಯ ಶಿಫಾರಸಿನ ಮೇರೆಗೆ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳಬೇಕೇ ಹೊರತು, ನಗರಾಯುಕ್ತರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ.

ಆಡಳಿತಾತ್ಮಕ ಜವಾಬ್ದಾರಿ ಹೊಂದಿರುವ ನಗರಾಯುಕ್ತರಿಗೆ ಇಂತಹ ಸೂಕ್ಷ್ಮ ವಿಷಯಗಳಲ್ಲಿ ‘ನ್ಯಾಯಾಧಿಕಾರ’ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಈ ತೀರ್ಪು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಡುವಿನ ಅಧಿಕಾರ ವಿಂಗಡಣೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. ಕಾನೂನುಬದ್ಧ ಪ್ರಕ್ರಿಯೆ ಮೀರಿ ಯಾವುದೇ ಅಧಿಕಾರಿಯೂ ಕಾರ್ಯನಿರ್ವಹಿಸುವಂತಿಲ್ಲ ಎಂಬ ಸಂದೇಶವನ್ನು ಈ ಆದೇಶ ನೀಡಿದೆ. ಇದರಿಂದಾಗಿ ಬೆಳಗಾವಿ ಪಾಲಿಕೆ ಸದಸ್ಯರ ಅನರ್ಹತೆಯ ಚೆಂಡು ಈಗ ರಾಜ್ಯ ಸರ್ಕಾರದ ಅಂಗಳಕ್ಕೆ ತಲುಪಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !