March 21, 2026
Saturday, March 21, 2026
spot_img

ಜಪಾನ್‌ ನ ಒಸಾಕಾ, ನಗೋಯಾ ನಗರಗಳಿಗೆ ನೇರ ವಿಮಾನ‌ ಸೇವೆ ಆರಂಭಿಸಲು ಚಿಂತನೆ: ಸಚಿವ ಎಂ.ಬಿ ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಜಪಾನ್‌ ದೇಶದ ಪ್ರಮುಖ ಕೈಗಾರಿಕಾ ನಗರಗಳಾಗಿರುವ ಒಸಾಕಾ ಮತ್ತು ನಗೋಯಾ ನಗರಗಳಿಗೆ ನೇರ ವಿಮಾನ‌ಸೇವೆ ಆರಂಭಿಸುವ ಕುರಿತು ಜಪಾನ್‌ ದೇಶದ ಕಾನ್ಸುಲ್ ಜನರಲ್ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಚರ್ಚಿಸಿದ್ದಾರೆ.

ಬಳಿಕ ಮಾತನಾಡಿದ ಸಚಿವರು, ಜಪಾನ್ ಜತೆ ಬಂಡವಾಳ ಹೂಡಿಕೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧ, ಹಾಗೂ ಭಾಷಾ ಕಲಿಕೆಯಂತಹ ಕೌಶಲ್ಯ ಬಲವರ್ಧನೆಗೆ ರಾಜ್ಯ ಸರ್ಕಾರದ ಮೂಲಕ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸೆ.6ರಿಂದ ಹತ್ತು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಬೆಂಗಳೂರಿನಿಂದ ಜಪಾನ್‌ನ ರಾಜಧಾನಿ ಟೋಕಿಯೋಗೆ ಮಾತ್ರ ನೇರ ವಿಮಾನ ಸೌಲಭ್ಯ ಇದೆ. ‌ಈ ವರ್ಷದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನಿನ ಹಲವು ಕಂಪನಿಗಳು ಡೇಟಾ ಸೆಂಟರ್, ಮ್ಯಾನಫ್ಯಾಕ್ಚರಿಂಗ್, ಲಾಜಿಸ್ಟಿಕ್ಸ್ ಮುಂತಾದ ವಲಯಗಳಲ್ಲಿ ರಾಜ್ಯದಲ್ಲಿ 7,500 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ ಅಲ್ಲಿನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ನಮ್ಮಲ್ಲಿಂದ ನೇರ ವಿಮಾನ ಸೇವೆ ಆರಂಭಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಜಪಾನಿನ 1,400 ಕಂಪನಿಗಳಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳು ತಯಾರಿಕೆ ವಲಯವೊಂದರಲ್ಲೇ ಸಕ್ರಿಯವಾಗಿವೆ. ಭಾರತದಲ್ಲಿನ ಎಫ್.ಡಿ.ಐ ಹೂಡಿಕೆಯಲ್ಲಿ ಜಪಾನ್ ಐದನೆಯ ಸ್ಥಾನದಲ್ಲಿದ್ದು, ಕಳೆದ ಎರಡು ವರ್ಷಗಳಲ್ಲಿ ಎರಡೂ ದೇಶಗಳ ನಡುವೆ 13 ಬಿಲಿಯನ್ ಡಾಲರ್ ಮೊತ್ತದ 170 ಒಡಂಬಡಿಕೆಗಳಾಗಿವೆ. ಜಪಾನ್ ಮತ್ತು ರಾಜ್ಯದ ನಡುವಿನ ವ್ಯವಹಾರ ಪ್ರಕ್ರಿಯೆಗಳ ನಿರ್ವಹಣೆಗೆ ಟೋಕಿಯೋದಲ್ಲಿ ಪ್ರಪ್ರಥಮ ಬಿಸಿಐಸಿ ಕಚೇರಿ ಆರಂಭಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿವರಿಸಿದ್ದಾರೆ.‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !