March 7, 2026
Saturday, March 7, 2026
spot_img

ನೇಪಾಳದಲ್ಲಿ ಭರ್ಜರಿ ಗೆಲುವಿನತ್ತ RPS: ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಾಲೇಂದ್ರ ಶಾ ಮುಂದಿನ ಪ್ರಧಾನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ಹಿಂಸಾತ್ಮಕ Gen Z ಪ್ರತಿಭಟನೆಗಳ ನಂತರದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ರ‍್ಯಾಪರ್-ರಾಜಕಾರಣಿ ಬಾಲೇಂದ್ರ ಶಾ ಅವರ ಹೊಸದಾಗಿ ರಚನೆಯಾದ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಭರ್ಜರಿ ಗೆಲುವಿನತ್ತ ಸಾಗುತ್ತಿದೆ.

ಕೆ.ಪಿ. ಒಲಿ ಶರ್ಮಾ ಸರ್ಕಾರದ ಪತನದ ಬಳಿಕ ಮಾ.5ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು ಸೋಮವಾರ ಫಲಿತಾಂಶ ಹೊರಬೀಳಲಿದೆ. ಅದರಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರುವುದು ಖಚಿತವಾಗಿದೆ. ಇದರಲ್ಲಿ ಒಟ್ಟು 94 ಕ್ಷೇತ್ರಗಳಲ್ಲಿ 70 ಕ್ಷೇತ್ರಗಳಲ್ಲಿ ಆರ್‌ಎಸ್‌ಪಿ ಜಯಭೇರಿ ಮುನ್ನಡೆ ಸಾಧಿಸಿದೆ. ಉಳಿದಂತೆ ನೇಪಾಳಿ ಕಾಂಗ್ರೆಸ್‌, ಸಿಪಿಎನ್- ಯುಎಂಎಲ್‌, ನೇಪಾಳಿ ಕಮ್ಯೂನಿಸ್ಟ್‌ ಪಕ್ಷಗಳು ತಲಾ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಮಾರ್ಚ್ 5 ರಂದು ನಡೆದ ಚುನಾವಣೆಯಲ್ಲಿ 58% ಮತದಾರರು ತಮ್ಮ ಮತಗಳನ್ನು ಚಲಾಯಿಸಿದರು. ಎಣಿಕೆಯು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಮಾರ್ಚ್ 9 ರೊಳಗೆ ಎಣಿಕೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಾಲೇಂದ್ರ ಶಾ ಯಾರು?
ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ್ದ ಬಾಲೇಂದ್ರ ಶಾ ಇದಕ್ಕೂ ಮುನ್ನ ಕಾಠ್ಮಂಡು ನಗರದ ಮೇಯರ್‌ ಆಗಿದ್ದರು. ಬಾಲೆನ್ ಅಂತಲೇ ಜನಪ್ರಿಯರಾಗಿದ್ದ ಇವರು ರಾಜಕಾರಣಕ್ಕೆ ಬರುವ ಮುನ್ನ ರ್‍ಯಾಪರ್‌ ಆಗಿ ಗುರುತಿಸಿಕೊಂಡಿದ್ದರು.

ಪ್ರಸ್ತುತ ಚುನಾವಣೆಯಲ್ಲಿ 4 ಸಲ ಪ್ರಧಾನಿಯಾಗಿದ್ದ ಒಲಿ ವಿರುದ್ಧ 4842 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

ಬಾಲೇಂದ್ರ ಶಾ 2016 ರಿಂದ 2018ರವರೆಗೆ ಬೆಳಗಾವಿ ವಿಟಿಯು ಅಡಿಯಲ್ಲಿ ಬರುವ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMIT) ನಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿ ಪಡೆದಿದ್ದರು.

ಆರ್‌ಎಸ್‌ಪಿ ಪಕ್ಷವನ್ನು ಕೇವಲ ನಾಲ್ಕು ವರ್ಷಗಳ ಹಿಂದೆ ಮಾಜಿ ಪತ್ರಕರ್ತ ರಬಿ ಲಾಮಿಚಾನೆ ಸ್ಥಾಪಿಸಿದ್ದರು. 2022 ರ ಚುನಾವಣೆಯಲ್ಲಿ ಪಕ್ಷವು 131 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು ಮತ್ತು 7 ನೇರ ಸ್ಥಾನಗಳು ಮತ್ತು 13 ಅನುಪಾತದ ಸ್ಥಾನಗಳನ್ನು ಗೆದ್ದಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !