ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿ ತಮ್ಮ ವಾಸದ ಹೋಟೆಲ್ ಬದಲಾಯಿಸಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರ ಕಾಕತಾಳೀಯವೋ ಅಥವಾ ಮೂಢನಂಬಿಕೆಯ ಪರಿಣಾಮವೋ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇದುವರೆಗೆ ತಂಡ ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ತಂಗಿತ್ತು. ಆದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋಲಿನ ನಂತರ ಹೋಟೆಲ್ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ಜೊತೆಗೆ 2023ರ ಏಕದಿನ ವಿಶ್ವಕಪ್ ಫೈನಲ್ ಸಮಯದಲ್ಲೂ ಭಾರತ ತಂಡ ಇದೇ ಹೋಟೆಲ್‌ನಲ್ಲಿ ತಂಗಿದ್ದು, ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಇದೇ ಸ್ಥಳದಲ್ಲಿ ತಂಗುವುದರಿಂದ ಅಶುಭ ಪರಿಣಾಮ ಉಂಟಾಗಬಹುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ತಂಡ ಹೊಸ ಹೋಟೆಲ್ ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ಇದೀಗ ಭಾರತ ತಂಡ ತಾಜ್ ಸ್ಕೈಲೈನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು, ನ್ಯೂಝಿಲೆಂಡ್ ತಂಡ ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ಉಳಿದಿದೆ. ಫೈನಲ್‌ಗೆ ಮೊದಲಾಗಿ ತಲುಪಿದ ತಂಡಕ್ಕೆ ಆ ಹೋಟೆಲ್ ಹಂಚಿಕೆ ಮಾಡುವ ಐಸಿಸಿ ನಿಯಮದ ಕಾರಣಕ್ಕೂ ಈ ಬದಲಾವಣೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಇದಲ್ಲದೆ ತಂಡದ ಸಿಬ್ಬಂದಿಯೊಬ್ಬರು ನೀಡಿದ ಸಲಹೆಯೂ ಇದಕ್ಕೆ ಕಾರಣವಾಗಿರಬಹುದು ಎಂಬ ಮಾಹಿತಿ ಇದೆ. ಈ ಹಿಂದೆ ಚಂದ್ರಗ್ರಹಣದ ದಿನ ಅಭ್ಯಾಸ ವೇಳೆಯನ್ನು ಮುಂದೂಡಲು ಕೂಡ ಇದೇ ಸಿಬ್ಬಂದಿ ಸಲಹೆ ನೀಡಿದ್ದರೆಂದು ತಿಳಿದುಬಂದಿದೆ. ಈಗ ಹೋಟೆಲ್ ಬದಲಾವಣೆ ಮೂಲಕ ಅದೃಷ್ಟ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದೆ ಟೀಮ್ ಇಂಡಿಯಾ.



