September 9, 2026
Wednesday, September 9, 2026
spot_img

ಕಾವೇರಿ ನೀರು vs ಮೇಕೆದಾಟು: ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರದಿಂದ ಹೊಸ ತಗಾದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂಕೋರ್ಟ್ ಆದೇಶದ ಅನ್ವಯ ಕರ್ನಾಟಕ ಸರ್ಕಾರವು ಪ್ರತಿ ವರ್ಷ ನಿಗಧಿತ ಪ್ರಮಾಣದಲ್ಲಿ ಕಾವೇರಿ ನೀರನ್ನು ಹರಿಸುತ್ತಿದ್ದರೂ, ತಮಿಳುನಾಡಿನ ಹೊಸ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ನೂತನ ಸರ್ಕಾರವು, ಕರ್ನಾಟಕವು ನಮಗೆ ಸಲ್ಲಬೇಕಾದ ಹಕ್ಕಿನ ನೀರನ್ನು ಹರಿಸುತ್ತಿಲ್ಲ, ಕೇವಲ ಹೆಚ್ಚುವರಿ ನೀರನ್ನು ಮಾತ್ರ ಬಿಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದೆ.

ರಾಜ್ಯಪಾಲರ ಭಾಷಣದಲ್ಲಿ ಕಾವೇರಿ ಕಿಡಿ

ತಮಿಳುನಾಡಿನ ಇಂದಿನ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. “ತಮಿಳುನಾಡಿಗೆ ಅನಾದಿ ಕಾಲದಿಂದಲೂ ಕಾವೇರಿ ನೀರನ್ನು ಬಳಸುವ ಐತಿಹಾಸಿಕ ಹಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದ್ದರೂ, ಪ್ರತಿ ವರ್ಷ ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ. ಕರ್ನಾಟಕವು ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲನ್ನು ನೀಡದೆ ವಂಚಿಸುತ್ತಿದೆ” ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಇದೇ ವೇಳೆ ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯ ವಿರುದ್ಧವೂ ತಮಿಳುನಾಡು ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಕರ್ನಾಟಕವು ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ತೀವ್ರ ಪ್ರಯತ್ನ ನಡೆಸುತ್ತಿದ್ದು, ಇದರಿಂದ ತಮಿಳುನಾಡಿನ ಕೃಷಿ ಉತ್ಪಾದನೆ ಮತ್ತು ರೈತರ ಜೀವನೋಪಾಯಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ. ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಮತ್ತು ಸರಿಯಾದ ಸಮಯಕ್ಕೆ ಕಾವೇರಿ ನೀರನ್ನು ಪಡೆದುಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೊಸ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !