March 8, 2026
Sunday, March 8, 2026
spot_img

ವಿಶ್ವಕಪ್ ಫೈನಲ್ ಸಮರ: ಟೀಮ್ ಇಂಡಿಯಾ ಗೆಲುವಿಗಾಗಿ ಬೆಳಗಾವಿಯಲ್ಲಿ ಗಣಪನಿಗೆ ವಿಶೇಷ ಪೂಜೆ!

ಹೊಸದಿಗಂತ ಬೆಳಗಾವಿ:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟಿ20 ವಿಶ್ವಕಪ್‌ನ ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಜಯಭೇರಿ ಬಾರಿಸಲಿ ಎಂದು ಬೆಳಗಾವಿಯ ಕ್ರೀಡಾಭಿಮಾನಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಭಕ್ತಿಯ ಮೊರೆ ಹೋಗಿದ್ದಾರೆ.

ನಗರದ ಪ್ರಸಿದ್ಧ ರಾಣಿ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಗಣಪತಿಗೆ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಲಾಯಿತು. ಭಾರತ ತಂಡದ ಆಟಗಾರರ ಭಾವಚಿತ್ರಗಳನ್ನು ಹಿಡಿದು ಮೆರವಣಿಗೆಯಂತೆ ಆಗಮಿಸಿದ ಕಾರ್ಯಕರ್ತರು, “ಭಾರತಕ್ಕೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿ ಶುಭ ಹಾರೈಸಿದರು.

ಪೂಜೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಕ ಗುಡಗನಟ್ಟಿ ಅವರು, “ಸೂರ್ಯಕುಮಾರ್ ಯಾದವ್ ನೇತೃತ್ವದ ನಮ್ಮ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ. ಈ ಬಾರಿ ವಿಶ್ವಕಪ್ ನಮ್ಮದಾಗುವುದು ಶತಸಿದ್ಧ. ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡ ವಿಜಯಪತಾಕೆ ಹಾರಿಸಲಿ ಎಂದು ನಾವು ವಿಘ್ನೇಶ್ವರನಲ್ಲಿ ಪ್ರಾರ್ಥಿಸಿದ್ದೇವೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳು, ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು, ಇಡೀ ನಗರದಲ್ಲಿ ಕ್ರಿಕೆಟ್ ಜ್ವರ ಮತ್ತು ದೇಶಭಕ್ತಿಯ ವಾತಾವರಣ ಮನೆ ಮಾಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !