March 9, 2026
Monday, March 9, 2026
spot_img

ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಸೇರಿ 23 ಮಂದಿಗೆ ದೆಹಲಿ ಹೈಕೋರ್ಟ್ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಅಬಕಾರಿ ನೀತಿ ಪ್ರಕರಣ ಮತ್ತೊಮ್ಮೆ ಕಾನೂನು ಪೈಪೋಟಿಗೆ ಕಾರಣವಾಗಿದ್ದು, ದೆಹಲಿ ಹೈಕೋರ್ಟ್ ಮಹತ್ವದ ಕ್ರಮ ಕೈಗೊಂಡಿದೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಒಟ್ಟು 23 ಮಂದಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಈ ವಿಚಾರಣೆಯನ್ನು ಮುಂದಿನ ಮಾರ್ಚ್ 16ರಂದು ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.

ಇದರ ಜೊತೆಗೆ, ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ ಕೇಜ್ರಿವಾಲ್ ಹಾಗೂ ಇತರ ಆರೋಪಿಗಳ ಬಿಡುಗಡೆ ಆದೇಶಕ್ಕೆ ತಡೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನೂ ಓದಿ:

ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಆರೋಪಿಗಳ ಬಿಡುಗಡೆ ಆದೇಶವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ಅದನ್ನು ಅಂಗೀಕರಿಸಲಿಲ್ಲ.

ಇದೇ ವೇಳೆ, ಸಿಬಿಐ ಸಲ್ಲಿಸಿರುವ ಪರಿಷ್ಕರಣಾ ಅರ್ಜಿಯ ಕುರಿತು ಹೈಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಲಾಗಿದೆ.

ಫೆಬ್ರವರಿ 27ರಂದು ಕೆಳ ನ್ಯಾಯಾಲಯ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರನ್ನು ಖುಲಾಸೆಗೊಳಿಸಿ, ಅಬಕಾರಿ ನೀತಿಯಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ಕಂಡುಬಂದಿಲ್ಲ ಎಂದು ಹೇಳಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !