ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಅನ್ನು ಭಾರತ ಗೆದ್ದು ಸಂಭ್ರಮಿಸಿದ್ದು, ಈ ಗೆಲುವಿನಲ್ಲಿ ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ಅಮೂಲ್ಯ ಕೊಡುಗೆಯನ್ನೇ ನೀಡಿದ್ದಾರೆ.
ಆಡಿದ ಕೇವಲ 5 ಇನ್ನಿಂಗ್ಸ್‌ಗಳಲ್ಲಿ 80.25ರ ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 199.37 ಇತ್ತು. ಇದರಲ್ಲಿ ಮೂರು ಅರ್ಧಶತಕ ಮತ್ತು 24 ಸಿಕ್ಸರ್‌ಗಳು ಸೇರಿವೆ.
ಈ ಯಶಸ್ಸಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್ ತಮ್ಮ ಪತ್ನಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಯೊಂದು ಹಾಕಿದ್ದಾರೆ.
‘ನಿನ್ನನ್ನು ಭೇಟಿಯಾದ ದಿನದಿಂದ ನನ್ನ ಜೀವನದ ಈ ಕ್ಷಣದವರೆಗೂ. ನನ್ನ ಜೊತೆ ನಿಂತಿದ್ದಕ್ಕೆ, ನಾನು ಯಾರೆಂದು ಅರ್ಥಮಾಡಿಕೊಂಡು ಪ್ರೀತಿಸಿದ್ದಕ್ಕೆ, ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ನನ್ನೊಂದಿಗೆ ಸದಾ ಪ್ರಾಮಾಣಿಕವಾಗಿದ್ದಕ್ಕೆ ನಿನಗೆ ತುಂಬಾ ಧನ್ಯವಾದಗಳು. ನನ್ನ ಒಳ್ಳೆಯ ಮತ್ತು ಕೆಟ್ಟ ಎರಡೂ ಮುಖಗಳನ್ನು ನೋಡಿದರೂ ನೀನು ನನ್ನ ಜೊತೆ ಗಟ್ಟಿಯಾಗಿ ನಿಂತೆ. ಕ್ರಿಕೆಟ್ ನನ್ನ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಅರ್ಥಮಾಡಿಕೊಂಡು, ಅದನ್ನು ನಿನ್ನದಾಗಿಯೂ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಸ್. ಈ ಕ್ಷಣಕ್ಕಾಗಿ ನಾನು ಎಷ್ಟು ಹಂಬಲಿಸಿ, ಕನಸು ಕಂಡಿದ್ದೆನೋ, ಅಷ್ಟೇ ತೀವ್ರತೆಯಿಂದ ನೀನೂ ಆಸೆಪಟ್ಟಿದ್ದೆ. ನನ್ನ ಪ್ರೀತಿಯ ಹೆಂಡತಿಗೆ ತುಂಬಾ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಸಂಜು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 89 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಬಾರಿಸಿದ್ದರು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 42 ಎಸೆತಗಳಲ್ಲಿ 89 ರನ್ ಚಚ್ಚಿದ್ದರು. ಟೂರ್ನಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನಾಗಿಸಿತು.
ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಭಾರತೀಯ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಮೊದಲ ಸ್ಥಾನಕ್ಕೇರಿದ್ದಾರೆ. ಸಂಜು ಸ್ಯಾಮ್ಸನ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ321 ರನ್ ಕಲೆ ಹಾಕಿದ್ದಾರೆ. ಇನ್ನು 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 319 ರನ್ ಗಳಿಸಿದ್ದರು. ಆ ದಾಖಲೆಯನ್ನು ಸಂಜು ಬ್ರೇಕ್ ಮಾಡಿದ್ದಾರೆ.



