ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭರ್ಜರಿ ಬಹುಮಾನ ಘೋಷಿಸಿದೆ.
ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಒಟ್ಟು ₹131 ಕೋಟಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊತ್ತವನ್ನು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರ ನಡುವೆ ಹಂಚಲಾಗುತ್ತದೆ.
2024ರ ಟಿ20 ವಿಶ್ವಕಪ್ ಗೆದ್ದಾಗ ಭಾರತ ತಂಡಕ್ಕೆ ₹125 ಕೋಟಿ ಬಹುಮಾನ ನೀಡಲಾಗಿತ್ತು. ಈ ಬಾರಿ ಆ ಮೊತ್ತವನ್ನು ₹6 ಕೋಟಿ ಹೆಚ್ಚಿಸಿ ₹131 ಕೋಟಿಗೆ ಏರಿಸಲಾಗಿದೆ. ಐಸಿಸಿ ವತಿಯಿಂದ ಚಾಂಪಿಯನ್ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತ ಸುಮಾರು ₹27.60 ಕೋಟಿ ಮಾತ್ರವಾಗಿದ್ದು, ಅದರಿಗಿಂತ ಹಲವು ಪಟ್ಟು ಹೆಚ್ಚಾಗಿ ಬಿಸಿಸಿಐ ಬಹುಮಾನ ಘೋಷಿಸಿರುವುದು ಗಮನಸೆಳೆಯಿತು.
ಇದನ್ನೂ ಓದಿ:
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗೆ ಆಲೌಟ್ ಆಯಿತು.
ಈ ಮೂಲಕ ಭಾರತ 96 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಟೂರ್ನಿ ಗೆದ್ದ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಿಗೂ ಇದೇ ರೀತಿಯ ಸಾಧನೆ ಮುಂದುವರಿಯಲಿ ಎಂದು ಹಾರೈಸಿದೆ.



