ಹೊಸದಿಗಂತ ಡಿಜಿಟಲ್ ಡೆಸ್ಕ್
2026ನೇ ಸಾಲಿನ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯ ಮತ್ತು ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಪ್ರಶ್ನೋತ್ತರವೇಳೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧೇಯಕಗಳನ್ನು ಮಂಡಿಸಿದರು. ಬಳಿಕ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಇದೇ ವೇಳೆ, 2026ನೇ ಸಾಲಿನ ಕರ್ನಾಟಕ ಜ್ಞಾನ ಭಂಡಾರ ಹಸ್ತ ಪ್ರತಿಗಳು ಮತ್ತು ಡಿಜಿಟಲೀಕರಣ ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು. ಇದಕ್ಕೂ ಮುನ್ನ, ಖಾಲಿ ಹುದ್ದೆಗಳ ಭರ್ತಿ , ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ವೈದ್ಯರು ಬಂದ್ ಗೆ ನಿರ್ಧರಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ವೈದ್ಯರ ಸಂಘದ ಮುಖಂಡರೊಂದಿಗೆ ಎರಡು ಹಂತದ ಸಭೆ ನಡೆಸಿ, ಚರ್ಚಿಸಲಾಗಿದೆ. ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಲಾಗಿದೆ. ಇಂದೂ ಸಹ ಪ್ರತಿಭಟನೆ ಕೈಬಿಡುವಂತೆ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಮನೆಗಳ ಮೇಲೆ ಅನಗತ್ಯವಾಗಿ ವಿವಿಧ ಬಗೆಯ ತೆರಿಗೆಯನ್ನು ವಿಧಿಸಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡ್ರೋನ್ ಗಳ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಭೌತಿಕವಾಗಿ ಪರಿಶೀಲಿಸಿದ ನಂತರವೇ ತೆರಿಗೆಗಳನ್ನು ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕೋಲಾರದಲ್ಲಿ ನೀರಿನ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ಶಾಸಕ ಮಂಜುನಾಥ್ ಅವರ ಮನವಿಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ವೈಜ್ಞಾನಿಕ ಸಂಸ್ಥೆಗಳಿಂದ ಕೋಲಾರದಲ್ಲಿ ನೀರಿನ ಸಂಸ್ಕರಣೆಯನ್ನು ಕಾಲ ಕಾಲಕ್ಕೆ ಮಾಡಲಾಗುತ್ತಿದೆ. ಅಗತ್ಯಬಿದ್ದರೆ, ಇತರೆ ವೈಜ್ಞಾನಿಕ ಸಂಸ್ಥೆಗಳಿಂದಲೂ ಅಧ್ಯಯನ ನಡೆಸಿ, ಅದರ ಶಿಫಾರಿನ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು.



