ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯ ಅಂಗನವಾಡಿಯಲ್ಲಿ ಮಗುವಿಗೆ ಕಬ್ಬಿಣದ ರಾಡ್ ತಗುಲಿದ್ದು, ತೀವ್ರ ರಕ್ತಸ್ರಾವವಾಗಿದೆ.
ಅಮೃತಾ ಅವರ ಮೂರು ವರ್ಷದ ಮಗುವನ್ನು ಅಂಗನವಾಡಿಗೆ ಕಳುಹಿಸಲಾಗಿತ್ತು. ಮಗು ಅಂಗನವಾಡಿಯ ಹೊರಗೆ ಆಡುವ ವೇಳೆ ಕಬ್ಬಿಣದ ತಂತಿ ತಗುಲಿಸಿಕೊಂಡಿದೆ. ಇದರಿಂದಾಗಿ ಮಗುವಿನ ಗುಪ್ತಾಂಗಕ್ಕೆ ಗಾಯವಾಗಿತ್ತು. ರಕ್ತಸ್ರಾವವಾಗಿದ್ದು ಕಂಡರೂ ಅಂಗನವಾಡಿ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿಲ್ಲ.
ಇನ್ನೊಂದು ಮಗುವಿನ ಜೊತೆ ಗಾಯಗೊಂಡ ಮಗುವನ್ನು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ನಂತರ ಮಗು ಜೋರಾಗಿ ಅತ್ತಿದೆ. ತಾಯಿ ಪರಿಶೀಲಿಸಿದಾಗ ರಕ್ತಸ್ರಾವ ಕಾಣಿಸಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಪ್ತಾಂಗಕ್ಕೆ ಆರು ಹೊಲಿಗೆ ಹಾಕಲಾಗಿದೆ.
ಅಂಗನವಾಡಿಯಲ್ಲಿ ಶಿಕ್ಷಕಿಯ ಬೇಜವಾಬ್ದಾರಿಯಿಂದಲೇ ಮಗುವಿಗೆ ಹೀಗಾಗಿದೆ ಎಂದು ಪೋಷಕರು ಅಂಗನವಾಡಿ ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.



