ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕೇರಳ ಈಗ ಕೇರಳಂ’ ಆಗಿ ಬದಲಾಗಿದೆ. ಮಲಯಾಳಿಗಳ ಬಹುಕಾಲದ ಆಸೆಯನ್ನು ಪೂರೈಸಿದ್ದಕ್ಕೆ ಕೇಂದ್ರ ಸರ್ಕಾರ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಕೇರಳಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಕೊಚ್ಚಿಯಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ 10,800 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ನನ್ನ ಪಾಲಿಗೆ ‘ಜನರೇ ನನ್ನ ದೇವರು’,ಆದ್ದರಿಂದ ನಾನು ಇಲ್ಲಿಗೆ ಬಂದಿರುವುದು ಆಶೀರ್ವಾದ ನೀಡಲು ಅಲ್ಲ, ಬದಲಿಗೆ ಜನರಿಂದ ಆಶೀರ್ವಾದ ಪಡೆಯಲು ಎಂದು ಅವರು ಹೇಳಿದರು.
ಈಗಾಗಲೇ ಮೀನುಗಾರರ ಸುರಕ್ಷತೆಗಾಗಿ ದೋಣಿಗಳಲ್ಲಿ 4,500 ಉಪಗ್ರಹ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಲಾಗಿದೆ. ಭವಿಷ್ಯದಲ್ಲಿ ಇದನ್ನು 1.5 ಲಕ್ಷ ದೋಣಿಗಳಿಗೆ ವಿಸ್ತರಿಸುವ ಯೋಜನೆ ಇದೆ. ಬಿಪಿಸಿಎಲ್ ಕೊಚ್ಚಿ ಸಂಸ್ಕರಣಾಗಾರದಲ್ಲಿರುವ 5,500 ಕೋಟಿ ವೆಚ್ಚದ ಪಾಲಿಪ್ರೊಪಿಲೀನ್ ಸ್ಥಾವರ, ರಾಷ್ಟ್ರೀಯ ಹೆದ್ದಾರಿ 66ರ ನವೀಕರಿಸಿದ ವಿಭಾಗಗಳು ಮತ್ತು ಅಮೃತ್ ಭಾರತ್ ರೈಲು ನಿಲ್ದಾಣಗಳು ಕೇರಳವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ ಎಂದರು.
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಯಿತು. ಇದು ಕರಾವಳಿ ವಲಯದಲ್ಲಿ ಗಮನಾರ್ಹ ಹೂಡಿಕೆಗಳಿಗೆ ಕಾರಣವಾಯಿತು ಎಂದು ಪ್ರಧಾನಿ ತಿಳಿಸಿದರು.
ಅಭಿವೃದ್ಧಿ ಯೋಜನೆಗಳಿಗೆ ಚಾಲನೆ:
5,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಿಪಿಸಿಎಲ್ ಕೊಚ್ಚಿ ಸಂಸ್ಕರಣಾಗಾರದಲ್ಲಿ ಪಾಲಿಪ್ರೊಪಿಲೀನ್ ಘಟಕಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯು ಭಾರತದ ಪಾಲಿಮರ್ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಆಮದುಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಅಮೃತ್ ಭಾರತ್ ಯೋಜನೆಯ ಭಾಗವಾಗಿ, ನವೀಕರಿಸಿದ ಶೋರನೂರ್ ಜಂಕ್ಷನ್, ಕುಟ್ಟಿಪ್ಪುರಂ ಮತ್ತು ಚಂಗನಶ್ಶೇರಿ ರೈಲು ನಿಲ್ದಾಣಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. ಈ ಯೋಜನೆಗಳ ಮೌಲ್ಯ ಸುಮಾರು ₹142 ಕೋಟಿ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 2,650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಆರು ಪಥಗಳ ತಲಪಾಡಿ-ಚೆಂಗಲ ಮಾರ್ಗ ಮತ್ತು 2,140 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕೋಝಿಕ್ಕೋಡ್ ಬೈಪಾಸ್ 6 ಪಥಗಳ ರಸ್ತೆಯನ್ನು ಉದ್ಘಾಟಿಸಿದರು.
ಶೋರನೂರು-ನಿಲಂಬೂರ್ ರೈಲು ಮಾರ್ಗದ ವಿದ್ಯುದೀಕರಣ ಮತ್ತು ಕೊಲ್ಲಂನ ಪಶ್ಚಿಮ ಕಲ್ಲಡದಲ್ಲಿ 50 ಮೆಗಾವ್ಯಾಟ್ ತೇಲುವ ಸೌರಶಕ್ತಿ ಯೋಜನೆಗಳಿಗೆ ಚಾಲನೆ ನೀಡಿದರು.



