ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಇರಾಕ್ ಪ್ರದೇಶದಲ್ಲಿ ಅಮೆರಿಕದ ವಾಯುಪಡೆಯ ಕೆಸಿ-135 ಸ್ಟ್ರಾಟೋಟ್ಯಾಂಕರ್ ಇಂಧನ ತುಂಬಿಸುವ ವಿಮಾನ ಗುರುವಾರ ಪತನಗೊಂಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ಘಟನೆ ಶತ್ರುಗಳ ದಾಳಿಯಿಂದ ಸಂಭವಿಸಿಲ್ಲ ಎಂದು ಅಮೆರಿಕದ ಸೇನೆ ಸ್ಪಷ್ಟಪಡಿಸಿದೆ.
ಪೆಂಟಗನ್ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಕರೆಯುವ ಇರಾನ್ ವಿರೋಧಿ ಕಾರ್ಯಾಚರಣೆಯ ವೇಳೆ ವಾಯುಪ್ರದೇಶದಲ್ಲಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಎರಡು ವಿಮಾನಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಅವುಗಳಲ್ಲಿ ಒಂದು ವಿಮಾನ ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದ್ದು, ಇನ್ನೊಂದು ಕೆಸಿ-135 ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಅಪಘಾತಕ್ಕೀಡಾದ ವಿಮಾನದಲ್ಲಿ ಕನಿಷ್ಠ ಐದು ಮಂದಿ ಸಿಬ್ಬಂದಿ ಇದ್ದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವುದೇ ಯುಎಸ್ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆಯೇ ಅಥವಾ ಮೃತಪಟ್ಟಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಈ ವಿಮಾನಗಳನ್ನು ಗಾಳಿಯಲ್ಲಿ ಇತರ ಯುದ್ಧವಿಮಾನಗಳಿಗೆ ಇಂಧನ ತುಂಬಿಸಲು ಬಳಸಲಾಗುತ್ತದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಯುಎಸ್ ಸೇನೆ ತಿಳಿಸಿದೆ.



