ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಮಿಲಿಟರಿ ಸಂಘರ್ಷದ ಬಿಸಿ ಇದೀಗ ಭಾರತೀಯ ನಾವಿಕರ ಸುರಕ್ಷತೆಗೆ ದೊಡ್ಡ ಆತಂಕ ತಂದಿಟ್ಟಿದೆ. ಓಮನ್ ಕರಾವಳಿ ತೀರದ ಸಮೀಪ ಚಲಿಸುತ್ತಿದ್ದ ಭಾರತದ ಧ್ವಜ ಹೊಂದಿದ ‘ಎಂಎಸ್ವಿ ಅಲ್ ಜುಸುಫಿ’ ಎಂಬ ಸರಕು ನೌಕೆಯ ಮೇಲೆ ಅಪರಿಚಿತ ವಸ್ತುವೊಂದು ಆಕಾಶದಿಂದ ಬಂದು ಅಪ್ಪಳಿಸಿದೆ. ಈ ಭೀಕರ ದಾಳಿಯಲ್ಲಿ ಗುಜರಾತ್ ಮೂಲದ ಭಾರತೀಯ ನಾವಿಕರೊಬ್ಬರು ಮರಣ ಹೊಂದಿದ್ದು, ಉಳಿದ 13 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಈ ಆಘಾತಕಾರಿ ಘಟನೆಯನ್ನು ದೃಢೀಕರಿಸಿದ್ದಾರೆ. ಮೃತಪಟ್ಟ ನಾವಿಕನನ್ನು ಗುಜರಾತ್ನ ಗಾಂಧರ್ ನಹೀಮ್ ಅಜೀಜ್ ಎಂದು ಗುರುತಿಸಲಾಗಿದ್ದು, ಸಚಿವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಓಮನ್ ಕೋಸ್ಟ್ ಗಾರ್ಡ್ನಿಂದ ರಕ್ಷಣೆ
ನವೆಂಬರ್ 2ರ ಸೋಮವಾರದಂದು ಈ ದುರಂತ ಸಂಭವಿಸಿದೆ. ಭಾರತದ 14 ಜನ ನಾವಿಕರಿದ್ದ ಹಡಗಿಗೆ ಅಪರಿಚಿತ ವೈಮಾನಿಕ ವಸ್ತು ಬಡಿದ ತಕ್ಷಣವೇ ಹಡಗಿನಲ್ಲಿದ್ದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಹೊರಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಓಮನ್ ದೇಶದ ತೀರರಕ್ಷಕ ಪಡೆ 13 ಭಾರತೀಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ. ಪ್ರಸ್ತುತ ಭಾರತೀಯ ರಾಯಭಾರ ಕಚೇರಿಯು ಓಮನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬದುಕುಳಿದವರನ್ನು ತಾಯ್ನಾಡಿಗೆ ಕರೆತರಲು ಮತ್ತು ಮೃತರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಇದನ್ನೂ ಓದಿ:
ಕಡಲ ಮಾರ್ಗದಲ್ಲಿ ನಿರಂತರ ದಾಳಿ
ಪಶ್ಚಿಮ ಏಷ್ಯಾ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇಂತಹ ಸರಣಿ ದಾಳಿಗಳು ತೀವ್ರಗೊಳ್ಳುತ್ತಿವೆ. ಇತ್ತೀಚೆಗಷ್ಟೇ ಮಾರ್ಷಲ್ ಐಲ್ಯಾಂಡ್ಸ್ ಧ್ವಜ ಹೊಂದಿದ್ದ ಎಲ್ಎನ್ಜಿ ಹಡಗಿನ ಮೇಲೂ ಇಂತಹದ್ದೇ ದಾಳಿ ನಡೆದಿತ್ತು. ಅದೃಷ್ಟವಶಾತ್ ಅದರಲ್ಲಿದ್ದ 6 ಭಾರತೀಯರು ಸೇರಿದಂತೆ ಎಲ್ಲಾ 25 ಸಿಬ್ಬಂದಿ ಸೇಫ್ ಆಗಿದ್ದರು.
ಸಮುದ್ರ ಮಾರ್ಗಗಳಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆ ಈಗ ತೀವ್ರ ಸವಾಲಾಗಿ ಪರಿಣಮಿಸಿದೆ.



