ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಹಿಮಪಾತದ ನಡುವೆ ನೇಪಾಳದ ಶೇ-ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಸಿಲುಕಿರುವ ಆರು ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಶನಿವಾರ ಮಧ್ಯಾಹ್ನದಿಂದ ಹಿಮಾವೃತ ಪ್ರದೇಶದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಹಿಮಪಾತದ ಎಚ್ಚರಿಕೆ ನಡುವೆಯೂ ಪ್ರವಾಸ
ಪ್ರವಾಸಿಗರು ಡೋಲ್ಪಾ ಜಿಲ್ಲೆಯ ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 8ರ ಡೋ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಭಾರೀ ಹಿಮಪಾತದಿಂದ ಮಾರ್ಗಗಳು ಹಿಮದಿಂದ ಆವೃತವಾಗಿವೆ ಎಂದು ಜಿಲ್ಲಾ ಮುಖ್ಯ ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಅವರೊಂದಿಗೆ ತೆರಳಿದ್ದ ನೇಪಾಳಿ ಮಾರ್ಗದರ್ಶಿ ಎಚ್ಚರಿಕೆ ನೀಡಿದ್ದರೂ, ಪ್ರವಾಸಿಗರು ಸರೋವರದತ್ತ ಮುಂದುವರಿದಿದ್ದರು ಎನ್ನಲಾಗಿದೆ.
ಸಂಪರ್ಕ ಕಡಿತ, ರಕ್ಷಣೆಗೆ ಸೇನಾ ಹೆಲಿಕಾಪ್ಟರ್
ಪ್ರವಾಸಿಗರು ಮಾರ್ಗದರ್ಶಿಯನ್ನು ಬಿಟ್ಟು ಮುಂದೆ ಸಾಗಿದ ಬಳಿಕ ಶನಿವಾರ ರಾತ್ರಿ ಅವರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಸಂಜೆ ಮಾರ್ಗದರ್ಶಿ ಡೋಲ್ಪಾ ಜಿಲ್ಲಾ ಆಡಳಿತ ಕಚೇರಿಗೆ ಮಾಹಿತಿ ನೀಡಿ, ಹಿಮಪಾತದಿಂದ ಪ್ರವಾಸಿಗರು ಸಿಲುಕಿರುವ ಸಾಧ್ಯತೆ ವ್ಯಕ್ತಪಡಿಸಿದ್ದರು. ಭಾನುವಾರ ಬೆಳಿಗ್ಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.
ಇದನ್ನೂ ಓದಿ:
ಆದರೆ ಪ್ರವಾಸಿಗರು ಇರುವ ಪ್ರದೇಶವನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವರನ್ನು ಕರೆತರಲು ಸೇನಾ ಹೆಲಿಕಾಪ್ಟರ್ ಆಗಮಿಸುವ ನಿರೀಕ್ಷೆಯಿದ್ದು, ಭದ್ರತಾ ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.
ಪ್ರವಾಸಿಗರ ಗುರುತು ಬಹಿರಂಗ
ಜಿಲ್ಲಾ ಆಡಳಿತ ಕಚೇರಿಯ ಪ್ರಕಟಣೆಯ ಪ್ರಕಾರ, ಸಿಲುಕಿರುವವರನ್ನು ಮೌಮಿತಾ ಹಲ್ದರ್, ಪಿಯಾಲಿ ಕೋಲೆ, ಜಜ್ಲಾ ತ್ರಿವೇದಿ ಕುಮಾರ್, ಆದಿತ್ಯ ಸಿಂಘಾ, ದೀಪ್ಲಿನಾ ಬಿಸ್ವಾಸ್ ಮತ್ತು ರಾಜೇಶ್ ಡೇ ಎಂದು ಗುರುತಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.



