ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಸಾಗಣೆಯ ಹೃದಯಭಾಗವಾಗಿರುವ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತರಕಕ್ಕೇರಿದ್ದು, ಜಲಸಂಧಿಯ ಆಯಕಟ್ಟಿನ ಕೆಶ್ಮ್ ದ್ವೀಪ ಮತ್ತು ಬಂದರ್ ಲೆಂಗೆ ಭಾಗದಲ್ಲಿ ಭೀಕರ ಸರಣಿ ಸ್ಫೋಟಗಳು ಸಂಭವಿಸಿದ್ದು, ಇಡೀ ವಲಯದಲ್ಲಿ ಮತ್ತೆ ಯುದ್ಧದ ಭೀತಿ ಆವರಿಸಿದೆ.
ವರದಿಗಳ ಪ್ರಕಾರ, ಅಮೆರಿಕದ ರಕ್ಷಣಾ ಪಡೆಗಳು ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲು ಕೆಶ್ಮ್ ದ್ವೀಪದಲ್ಲಿ ‘ಸೀಮಿತ ದಾಳಿಗಳನ್ನು’ ನಡೆಸಿರುವುದನ್ನು ವಾಷಿಂಗ್ಟನ್ ಖಚಿತಪಡಿಸಿದೆ. ಈ ದಾಳಿಯ ಸಮಯದಲ್ಲಿ ಆಕಾಶದಲ್ಲಿ ಯುದ್ಧ ವಿಮಾನಗಳು ಹಾರಾಡುತ್ತಿದ್ದುದನ್ನು ಮತ್ತು ಸರಣಿ ಸ್ಫೋಟಗಳು ಸಂಭವಿಸಿದ್ದನ್ನು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ 3 ಡ್ರೋನ್ ಹೊಡೆದುರುಳಿಸಿದ ಇರಾನ್
ಅಮೆರಿಕದ ದಾಳಿಯ ವರದಿಗಳು ಹೊರಬೀಳುತ್ತಿದ್ದಂತೆ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿರುಗೇಟು ನೀಡಿದೆ. ಹಾರ್ಮುಜ್ ಜಲಸಂಧಿ ವ್ಯಾಪ್ತಿಯಲ್ಲಿ ಅಮೆರಿಕಕ್ಕೆ ಸೇರಿದ 3 ಅತ್ಯಾಧುನಿಕ ಡ್ರೋನ್ಗಳನ್ನು ತಾನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿಕೊಂಡಿದೆ.
ಕೆಶ್ಮ್ ದ್ವೀಪದ ದಕ್ಷಿಣ ಭಾಗದಲ್ಲಿ ಅಮೆರಿಕದ ಎರಡು MQM-170 ವಿಚಕ್ಷಣಾ ಡ್ರೋನ್ಗಳನ್ನು ಇರಾನ್ ತನ್ನ ‘ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ’ ಮೂಲಕ ಜ್ಯಾಮ್ ಮಾಡಿ ವಶಪಡಿಸಿಕೊಂಡಿದೆ. ಜಲಸಂಧಿಯ ಪೂರ್ವ ಭಾಗದಲ್ಲಿ ಅಮೆರಿಕದ ದುಬಾರಿ ‘MQ-9’ ಡ್ರೋನ್ ಅನ್ನು ಇರಾನ್ ತನ್ನ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿದೆ. ಇದು ತಾನು ಹೊಡೆದುರುಳಿಸಿದ ಅಮೆರಿಕದ 55ನೇ ಡ್ರೋನ್ ಎಂದು ಇರಾನ್ ಸೇನೆ ಹೆಮ್ಮೆಯಿಂದ ಹೇಳಿಕೊಂಡಿದೆ.
ಡೊನಾಲ್ಡ್ ಟ್ರಂಪ್ ಮಾತುಕತೆ ಆಶಾವಾದ
ಒಂದೆಡೆ ನಡುಸಮುದ್ರದಲ್ಲಿ ಕ್ಷಿಪಣಿ ಮತ್ತು ಡ್ರೋನ್ಗಳ ಯುದ್ಧ ನಡೆಯುತ್ತಿದ್ದರೆ, ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಒಪ್ಪಂದದ ಮೂಲಕವೇ ಬಿಕ್ಕಟ್ಟು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇರಾನ್ ಜಾಗತಿಕ ಒಪ್ಪಂದಕ್ಕೆ ಬರಲು ಇಷ್ಟಪಡುತ್ತಿದೆ. ಹೀಗಾಗಿ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇಲ್ಲ” ಎಂದು ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯುದ್ಧದ ಭೀತಿ ದೂರವಾಗುತ್ತಿದೆ ಎಂಬ ಆಶಾವಾದ ಮೂಡುತ್ತಿದ್ದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಬರೋಬ್ಬರಿ 10 ಡಾಲರ್ಗಳಷ್ಟು ಭಾರೀ ಕುಸಿತ ಕಂಡಿದೆ.
ಇದನ್ನೂ ಓದಿ:
ಭಾರತದ ಮೇಲಾಗುವ ಪರಿಣಾಮವೇನು?
ಹಾರ್ಮುಜ್ ಜಲಸಂಧಿಯು ವಿಶ್ವದ ಕಚ್ಚಾ ತೈಲ ಮತ್ತು ಎಲ್ಪಿಜಿ ಸಾಗಣೆಯ ಪ್ರಮುಖ ಜೀವನಾಡಿಯಾಗಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಇರಾಕ್ ದೇಶಗಳ ತೈಲ ಹಡಗುಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ತಲುಪುವುದು ಇದೇ ಮಾರ್ಗದ ಮೂಲಕ. ಈ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿ ಹಡಗುಗಳ ಸಂಚಾರಕ್ಕೆ ತಡೆಯುಂಟಾದರೆ ಜಾಗತಿಕ ತೈಲ ಪೂರೈಕೆ ಏರುಪೇರಾಗಿ, ತೈಲ ಬೆಲೆಗಳು ಗಗನಕ್ಕೇರಲಿವೆ. ಭಾರತವು ತನ್ನ ಬಹುಪಾಲು ತೈಲವನ್ನು ಪಶ್ಚಿಮ ಏಷ್ಯಾದಿಂದಲೇ ಆಮದು ಮಾಡಿಕೊಳ್ಳುವುದರಿಂದ, ದೆಹಲಿ ಈ ಇಡೀ ಬೆಳವಣಿಗೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.



