ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಯಲಹಂಕದಲ್ಲಿರುವ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರ ತಾತ್ಕಾಲಿಕವಾಗಿ ಬಂದ್ ಆಗಿರುವುದರಿಂದ ವಿದ್ಯುತ್ ಕೊರತೆ ಉಂಟಾಗಬಹುದೇ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಇದರಿಂದ ರಾಜ್ಯದ ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಗುರುವಾರ ಬೆಳಿಗ್ಗೆ 10.30ರವರೆಗೆ ರಾಜ್ಯದಲ್ಲಿ ಸುಮಾರು 18,800 ಮೆಗಾವಾಟ್ ವಿದ್ಯುತ್ ಬೇಡಿಕೆ ದಾಖಲಾಗಿದ್ದು, ಇದು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಬೇಡಿಕೆಯಾಗಿದೆ. ಕಳೆದ ವರ್ಷ ಮಾರ್ಚ್ 7 ಮತ್ತು 19ರಂದು 18,395 ಮೆಗಾವಾಟ್ ಬೇಡಿಕೆ ದಾಖಲಾಗಿತ್ತು.
ಇದನ್ನೂ ಓದಿ:
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆದಲ್ಲಿ ಗೇಲ್ (GAIL) ಸಂಸ್ಥೆ ಯಲಹಂಕ ಗ್ಯಾಸ್ ವಿದ್ಯುತ್ ಸ್ಥಾವರಕ್ಕೆ ಗ್ಯಾಸ್ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಅಧಿಕಾರಿಗಳು ತಿಳಿಸಿದ್ದಾರೆ. ಇತರ ಕ್ಷೇತ್ರಗಳಲ್ಲಿ ಗ್ಯಾಸಿನ ಬೇಡಿಕೆ ಹೆಚ್ಚಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆದರೆ ರಾಜ್ಯದಲ್ಲಿ ಸೌರಶಕ್ತಿ ಸೇರಿದಂತೆ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚುತ್ತಿರುವುದರಿಂದ ಬೇಸಿಗೆ ವೇಳೆಯ ಬೇಡಿಕೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸುಮಾರು 36,000 ರಿಂದ 37,000 ಮೆಗಾವಾಟ್ ಇದ್ದು, ಅದರಲ್ಲೂ ದೊಡ್ಡ ಭಾಗ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ.



