ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದಾಗಿ ‘ಹೋರ್ಮುಜ್ ಜಲಸಂಧಿ’ ಬಂದ್ ಆಗಿರುವುದು ಭಾರತದ ಪಾಲಿಗೆ ಆತಂಕ ತಂದೊಡ್ಡಿದೆ.
ಭಾರತಕ್ಕೆ ಬರಬೇಕಿದ್ದ ಎಂಟು ಬೃಹತ್ ಎಲ್‌ಪಿಜಿ (LPG) ಟ್ಯಾಂಕರ್‌ಗಳು ಜಲಸಂಧಿಯ ಸಮೀಪವೇ ಸಿಲುಕಿಕೊಂಡಿದ್ದು, ಕೇಂದ್ರ ಸರ್ಕಾರ ಇರಾನ್ ಜೊತೆ ರಾಜತಾಂತ್ರಿಕ ಮಾತುಕತೆ ಆರಂಭಿಸಿದೆ.
ಸೌದಿ ಅರೇಬಿಯಾ ಮತ್ತು ಕತಾರ್‌ನಿಂದ ಎಲ್‌ಪಿಜಿ ಹೊತ್ತು ಬರುತ್ತಿದ್ದ ಎಂಟು ಬೃಹತ್ ಹಡಗುಗಳು ಹೋರ್ಮುಜ್ ಜಲಸಂಧಿಯ ಪ್ರವೇಶ ದ್ವಾರದಲ್ಲೇ ನಿಂತಿವೆ. ಈ ಹಡಗುಗಳಿಗೆ ಸುರಕ್ಷಿತ ಹಾದಿ ಮಾಡಿಕೊಡುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇದರ ನಡುವೆ ಸುಮಾರು 250 ಮಂದಿ ಇರಾನ್ ನಾವಿಕರು ಪ್ರಸ್ತುತ ಭಾರತದಲ್ಲಿದ್ದಾರೆ. ಯುದ್ಧದ ಪರಿಸ್ಥಿತಿಯಿಂದಾಗಿ ಅವರು ತಮ್ಮ ದೇಶಕ್ಕೆ ಮರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದುಕೊಂಡಿದ್ದಾರೆ. ಭಾರತ ಸರ್ಕಾರ ಅವರಿಗೆ ಆಶ್ರಯ ನೀಡಿದ್ದು, ಅವರನ್ನು ಸುರಕ್ಷಿತವಾಗಿ ಇರಾನ್‌ಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದೆ. ಈ ಮಾನವೀಯ ನಡೆಗೆ ಇರಾನ್ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಭಾರತೀಯ ಎಲ್‌ಪಿಜಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



