ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್‌ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿ ಯೋಜನೆಗಳ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಬೃಹತ್ ಪಾದಯಾತ್ರೆ ನಡೆಸುವುದಾಗಿ ಸಂಸದ ಡಾ. ಕೆ. ಸುಧಾಕರ್ ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಹರಿಯುತ್ತಿರುವ ನೀರು ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿ, ಆಧುನಿಕ ತಂತ್ರಜ್ಞಾನದ ಮೂಲಕ ನೀರಿನ ಶುದ್ಧತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ವಿಶ್ವದ ವಿವಿಧ ರಾಷ್ಟ್ರಗಳ ಉದಾಹರಣೆ ನೀಡಿದ ಸಂಸದರು, “ಸಿಂಗಾಪುರ ಮತ್ತು ನಮೀಬಿಯಾದಲ್ಲಿ ಕೊಳಚೆ ನೀರನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕುಡಿಯುವ ನೀರಿನ ಮಟ್ಟಕ್ಕೆ ಶುದ್ಧೀಕರಿಸಲಾಗುತ್ತಿದೆ. ನಮ್ಮಲ್ಲೂ ಅಂತಹ ಬದ್ಧತೆ ಪ್ರದರ್ಶಿಸಿ, ನದಿ ನೀರಿನಷ್ಟು ಶುದ್ಧವಾಗಿ ನೀರನ್ನು ಒದಗಿಸಲು ಸರ್ಕಾರಕ್ಕೆ ಅವಕಾಶವಿದೆ,” ಎಂದು ಸಲಹೆ ನೀಡಿದರು.
ಇದೇ ವೇಳೆ ಪ್ರತಿಭಟನೆಯ ಹೆಸರಿನಲ್ಲಿ ‘ಬಂದ್’ ನಡೆಸುವುದನ್ನು ಅವರು ವಿರೋಧಿಸಿದರು. “ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ದೈನಂದಿನ ದುಡಿಮೆಯನ್ನೇ ನಂಬಿರುವ ಬೀದಿ ಬದಿ ವ್ಯಾಪಾರಿಗಳಿಗೆ ಬಂದ್‌ನಿಂದ ತೊಂದರೆಯಾಗುತ್ತದೆ. ಜನಸಾಮಾನ್ಯರಿಗೆ ಕಷ್ಟ ಕೊಡದೆ ಹೋರಾಟ ಮಾಡುವುದು ನಮ್ಮ ಉದ್ದೇಶ. ಹೀಗಾಗಿ ನಾನು ಮತ್ತು ಬಿಜೆಪಿ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಬದಲಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಅರಿವು ಮೂಡಿಸಲು ಪಾದಯಾತ್ರೆ ನಡೆಸುತ್ತೇನೆ,” ಎಂದು ಸ್ಪಷ್ಟಪಡಿಸಿದರು.



