July 16, 2026
Thursday, July 16, 2026
spot_img

19 ನೇ ದಿನಕ್ಕೆ ಸೊನಮ್ ವಾಂಗ್ಚುಕ್ ಉಪವಾಸ: 9 ಕೆ.ಜಿ. ತೂಕ ಇಳಿಕೆ, ಆರೋಗ್ಯದ ಬಗ್ಗೆ ನಿರಂತರ ನಿಗಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಗುರುವಾರ 19ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಬಗ್ಗೆ ಆತಂಕ ಹೆಚ್ಚುತ್ತಿದೆ. ವೈದ್ಯರ ಪ್ರಕಾರ, ಉಪವಾಸ ಆರಂಭಿಸಿದ ಬಳಿಕ ಅವರು 9 ಕೆ.ಜಿ.ಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಇದೇ ವೇಳೆ, ಅವರ ಆರೋಗ್ಯವನ್ನು ಪ್ರತಿದಿನ ಪರಿಶೀಲಿಸಿ ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ನೆರವು ಒದಗಿಸಬೇಕು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಾಂಗ್ಚುಕ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ಡಾ. ಸತೀಶ್ ಲಂಬಾ, ನಿರಂತರ ಉಪವಾಸ ಮುಂದುವರಿದರೆ ದೇಹದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗುವ ಅಪಾಯ ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ. ಆದರೂ ಸದ್ಯ ಅವರು ಮಾನಸಿಕವಾಗಿ ಚೇತರಿಸಿಕೊಂಡಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದಿದ್ದಾರೆ.
ಬುಧವಾರ ರಾತ್ರಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಮಾತನಾಡಿದ ವಾಂಗ್ಚುಕ್, ಸಾವಿರಾರು ಮಂದಿ ಉಪವಾಸ ಕೈಬಿಡುವಂತೆ ಮನವಿ ಮಾಡುತ್ತಿದ್ದಾರೆ. ಅನೇಕ ಹಿರಿಯ ನಾಯಕರು ಪ್ರೀತಿಯಿಂದ ಮಾತನಾಡಿದ್ದಾರೆ. ಆದರೆ ನಾನು ಈಗ ಉಪವಾಸ ಮುಗಿಸಿದರೆ ಸರ್ಕಾರಕ್ಕೆ ಯಾವ ಸಂದೇಶ ಹೋಗುತ್ತದೆ? ಎಂದು ಪ್ರಶ್ನಿಸಿದ್ದರು. ಇದೇ ವೇಳೆ, ಜುಲೈ 20ರಂದು ನಡೆಯಲಿರುವ ‘ಸಂಸತ್ ಚಲೋ’ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವರು ಕರೆ ನೀಡಿದ್ದರು.

ಇದನ್ನೂ ಓದಿ:

ಹೈಕೋರ್ಟ್‌ನ ಮಹತ್ವದ ಆದೇಶ

ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿರುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಜೀವ ಅಮೂಲ್ಯ ಎಂದು ಹೇಳಿ, ಅವರ ಆರೋಗ್ಯವನ್ನು ಪ್ರತಿದಿನ ಸರ್ಕಾರಿ ವೈದ್ಯರಿಂದ ಪರೀಕ್ಷಿಸಬೇಕು ಹಾಗೂ ವೈದ್ಯರ ಸಲಹೆಯಂತೆ ಅಗತ್ಯ ಚಿಕಿತ್ಸೆ ನೀಡಲು ಸಿದ್ಧವಾಗಿರಬೇಕು ಎಂದು ಸರ್ಕಾರಗಳಿಗೆ ಸೂಚಿಸಿದೆ. ಆರೋಗ್ಯ ಸ್ಥಿತಿ ಗಂಭೀರವಾದರೆ ವೈದ್ಯಕೀಯ ಸಲಹೆಯಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ನಡುವೆ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವರು ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ. ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಕೂಡ ಸರ್ಕಾರವು ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !