March 15, 2026
Sunday, March 15, 2026
spot_img

ತಿಂಗಳಿಗೆ 1.5 ಲಕ್ಷ ರೂ. ಸಂಬಳ ಇದ್ರೂ ಕೈಯಲ್ಲಿ ಉಳಿಯೋದು ಇಷ್ಟೇ: ಬೆಂಗಳೂರಿನ ಗೋಳು ಬಿಚ್ಚಿಟ್ಟ ಟೆಕ್ಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಡ ನಗರದಲ್ಲಿ ದೊಡ್ಡ ಸಂಬಳ ಸಿಕ್ಕರೆ ಜೀವನ ಸುಖವಾಗಿರುತ್ತದೆ ಎನ್ನುವ ಕಲ್ಪನೆ ಹಲವರಿಗಿದೆ. ಆದರೆ ಬೆಂಗಳೂರುನಲ್ಲಿ ವಾಸಿಸುವ ಒಬ್ಬ ಟೆಕ್ಕಿಯ ಅನುಭವ ಈ ಕಲ್ಪನೆಗೆ ವಿರುದ್ಧವಾದ ಚಿತ್ರಣ ನೀಡಿದೆ. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಪಡೆದರೂ ತಿಂಗಳ ಕೊನೆಯಲ್ಲಿ ಕೇವಲ 15ರಿಂದ 20 ಸಾವಿರ ರೂ. ಮಾತ್ರ ಉಳಿಯುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

X (Twitter)ನಲ್ಲಿ @AlfinCodes ಎಂಬ ಖಾತೆಯಿಂದ ಹಂಚಿಕೊಂಡ ಪೋಸ್ಟ್‌ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ಯುವಕನೊಬ್ಬ ಸಾಫ್ಟ್‌ವೇರ್ ಡೆವಲಪರ್ ಆಗಿ ಉತ್ತಮ ಸಂಬಳದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಾನೆ. ಆರಂಭದಲ್ಲಿ ಕುಟುಂಬದವರು ದೊಡ್ಡ ನಗರದಲ್ಲಿ ದೊಡ್ಡ ಸಂಬಳದ ಕೆಲಸ ಸಿಕ್ಕಿದೆ ಎಂದು ಸಂತೋಷಪಟ್ಟಿದ್ದರು. ಆದರೆ ನಗರದಲ್ಲಿನ ಜೀವನ ವೆಚ್ಚ ಆತನಿಗೆ ಬೇಗನೆ ನಿಜವಾದ ಸ್ಥಿತಿಯನ್ನು ತಿಳಿಸಿಕೊಟ್ಟಿದೆ ಎಂದು ಪೋಸ್ಟ್‌ನಲ್ಲಿದೆ.

ಇದನ್ನೂ ಓದಿ:

ಕಚೇರಿಯ ಸಮೀಪದ ಸಣ್ಣ ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ ಸುಮಾರು 36 ಸಾವಿರ ರೂ. ಬಾಡಿಗೆ ಕೊಡಬೇಕಾಗುತ್ತಿತ್ತು. ಆಹಾರ ಮತ್ತು ದಿನಸಿ ವೆಚ್ಚಕ್ಕೆ 13ರಿಂದ 15 ಸಾವಿರ ರೂ. ಖರ್ಚಾಗುತ್ತಿತ್ತು. ಟ್ರಾಫಿಕ್ ಸಮಸ್ಯೆಯಿಂದ ಕ್ಯಾಬ್ ಮತ್ತು ಆಟೋ ಪ್ರಯಾಣಕ್ಕೆ 6ರಿಂದ 8 ಸಾವಿರ ರೂ.ವರೆಗೆ ವೆಚ್ಚವಾಗುತ್ತಿತ್ತು.

ಇದಕ್ಕಿಂತಲೂ ಹೆಚ್ಚಾಗಿ ಸ್ವಿಗ್ಗಿ ಆರ್ಡರ್, ಕಾಫಿ ಹಾಗೂ ವಾರಾಂತ್ಯದ ಖರ್ಚುಗಳಿಗೆ ಸುಮಾರು 10ರಿಂದ 12 ಸಾವಿರ ರೂ. ಖರ್ಚಾಗುತ್ತಿತ್ತು. ಇತರ ಚಂದಾದಾರಿಕೆ, ವೈದ್ಯಕೀಯ ವೆಚ್ಚ ಮತ್ತು ಮನೆಗೆ ಹಣ ಕಳುಹಿಸುವುದನ್ನು ಸೇರಿಸಿದರೆ ತಿಂಗಳ ಕೊನೆಯಲ್ಲಿ ಕೇವಲ 15ರಿಂದ 20 ಸಾವಿರ ರೂ. ಮಾತ್ರ ಉಳಿಯುತ್ತಿತ್ತು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ಪೋಸ್ಟ್ ವೈರಲ್ ಆಗಿದ್ದು, ಮಹಾನಗರಗಳಲ್ಲಿ ಹೆಚ್ಚಿನ ಸಂಬಳ ಇದ್ದರೂ ಜೀವನ ವೆಚ್ಚ ಹೆಚ್ಚಿರುವುದರಿಂದ ಉಳಿತಾಯ ಕಡಿಮೆಯಾಗುತ್ತದೆ ಎಂಬ ಚರ್ಚೆ ಮತ್ತೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !