ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಸಂಬಂಧಪಟ್ಟಂತೆ ಬಾರಾಮತಿ ವಿಮಾನ ಪತನದ ಕುರಿತು ಪಾರದರ್ಶಕ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ .
ಈ ಕುರಿತು ಶಾಸಕ ರೋಹಿತ್ ಪವಾರ್ ಅವರು ಹಲವು ಬಾರಿ ಅನುಮಾನ ವ್ಯಕ್ತಪಡಿಸಿದ್ದು, ಇದು ಕೇವಲ ಅಪಘಾತವಲ್ಲ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೆ ಸಿಎಂ ಫಡ್ನವೀಸ್ ಪತ್ರ ಬರೆಯುವ ಮೂಲಕ ಸಮಗ್ರ ತನಿಖೆಗೆ ಮನವಿ ಮಾಡಿದ್ದಾರೆ.
ವಿಮಾನದಲ್ಲಿನ ಸಿಬ್ಬಂದಿ ನಿಯೋಜನೆ, ಅಲ್ಲಿನ ನಿಯಮಗಳು, ಲ್ಯಾಂಡಿಂಗ್ ಸಮಯದಲ್ಲಿ ಕಾರ್ಯಾಚರಣೆ, ಮೇಲ್ವಿಚಾರಣೆಯ ಮೊದಲಾದ ವಿಚಾರಗಳ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಯಬೇಕೆಂದು ಸಿಎಂ ಫಡ್ನವೀಸ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಜಿತ್ ಪವಾರ್ ಅವರ ಸಾವಿನ ಕುರಿತು ಶಾಸಕ ರೋಹಿತ್ ಪವಾರ್ ಹಲವು ಬಾರಿ ಧ್ವನಿ ಎತ್ತಿದ್ದರು. ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆಯಾಗುವಂತೆ ಸಿಎಂ ಫಡ್ನವೀಸ್, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು.
ಜನವರಿ 28ರ ಬೆಳಿಗ್ಗೆ ಮುಂಬೈನಿಂದ ಹೊರಟಿದ್ದ ಚಾರ್ಟರ್ಡ್ ವಿಮಾನವು ಸುಮಾರು 45 ನಿಮಿಷಗಳ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಪತನವಾಗಿತ್ತು. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರು ಪ್ರಾಣ ಕಳೆದುಕೊಂಡಿದ್ದರು.



