ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮತದಾರರಿಗೆ ಇಲ್ಲಿದೆ ಒಂದು ಪ್ರಮುಖ ಮಾಹಿತಿ. ವಾರ್ಡ್‌ವಾರು ಮತದಾರರ ತಾತ್ಕಾಲಿಕ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ದೂರು ಹಾಗೂ ಆಕ್ಷೇಪಣೆ ಸಲ್ಲಿಸಲು ನಿಗದಿಯಾಗಿದ್ದ ಕಾಲಾವಕಾಶವನ್ನು ಈಗ ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕೃತವಾಗಿ ತಿಳಿಸಿದೆ.
ಈ ಹಿಂದೆ ಮಾರ್ಚ್ 20 ಕೊನೆಯ ದಿನಾಂಕವಾಗಿತ್ತು. ಆದರೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಚರ್ಚಿಸಿ, ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚಿನ ಸಮಯ ಬೇಕೆಂದು ಒತ್ತಾಯಿಸಿದ್ದರು.
ಅನೇಕ ವಸತಿ ಕಲ್ಯಾಣ ಸಂಘಗಳು ಮತ್ತು ನಾಗರಿಕರು ಫೋನ್ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ, ಹೆಸರು ಹುಡುಕಲು ಮತ್ತು ತಿದ್ದುಪಡಿ ಸೂಚಿಸಲು ಕಾಲಾವಕಾಶ ಸಾಲುತ್ತಿಲ್ಲ ಎಂದು ಮನವಿ ಮಾಡಿದ್ದರು.
ಈ ಮನವಿಗಳನ್ನು ಪರಿಗಣಿಸಿದ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಜನರ ಹಿತದೃಷ್ಟಿಯಿಂದ ಆಯೋಗವು ಈಗ ಹತ್ತು ದಿನಗಳ ಹೆಚ್ಚುವರಿ ಸಮಯವನ್ನು ನೀಡಿದೆ.
ಮಾರ್ಚ್ 09 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಿ. ಏನಾದರೂ ಬದಲಾವಣೆ ಅಥವಾ ಆಕ್ಷೇಪಣೆಗಳಿದ್ದರೆ ಮಾರ್ಚ್ 30ರ ಒಳಗಾಗಿ ಸಲ್ಲಿಸಲು ಇದೀಗ ಸುಸಂದರ್ಭ ಒದಗಿಬಂದಿದೆ.



