October 4, 2026
Sunday, October 4, 2026
spot_img

ಉಕ್ರೇನ್‌ ಮೇಲೆ ರಷ್ಯಾ ಡ್ರೋನ್ ದಾಳಿ: ಭಾರತೀಯ ಮೂಲದ ಕುಸುಮ್ ಫಾರ್ಮಾ ಘಟಕ ಧ್ವಂಸ: ಓರ್ವ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ನಡೆಸಿದ ಡ್ರೋನ್ ದಾಳಿಗೆ ಉಕ್ರೇನ್‌ನ ಸುಮಿ ನಗರದಲ್ಲಿರುವ ಭಾರತೀಯ ಮೂಲದ ‘ಕುಸುಮ್ ಗ್ರೂಪ್’ಗೆ ಸೇರಿದ ಬೃಹತ್ ಔಷಧ ತಯಾರಿಕಾ ಘಟಕ ತೀವ್ರವಾಗಿ ಹಾನಿಗೊಳಗಾಗಿದೆ. ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಘಟಕದ ಪ್ರಮುಖ ಕಟ್ಟಡ ಬಹುತೇಕ ನಾಶವಾಗಿದ್ದು, ಹಾನಿಯ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಸೇನೆಯ ಡ್ರೋನ್‌ಗಳು ಔಷಧ ತಯಾರಿಕಾ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಹೊಗೆ ಆವರಿಸಿರುವ ದೃಶ್ಯಗಳು ವೈರಲ್ ಆಗಿವೆ. ದಾಳಿಯ ಪರಿಣಾಮ ಕಾರ್ಖಾನೆಯ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದ್ದು, ಉತ್ಪಾದನಾ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಉಕ್ರೇನ್‌ನೊಂದಿಗೆ ದೀರ್ಘಕಾಲದ ನಂಟು

ಭಾರತೀಯ ಔಷಧಗಳನ್ನು ಉಕ್ರೇನ್‌ಗೆ ರಫ್ತು ಮಾಡುವ ವಿತರಕ ಸಂಸ್ಥೆಯಾಗಿ 1994ರಲ್ಲಿ ಕುಸುಮ್ ಗ್ರೂಪ್ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ನಂತರ ಸ್ವಂತ ಔಷಧ ಬ್ರ್ಯಾಂಡ್‌ಗಳ ಉತ್ಪಾದನೆ ಹಾಗೂ ಮಾರುಕಟ್ಟೆ ಪ್ರವೇಶಿಸಿದ ಸಂಸ್ಥೆ, 2007ರಲ್ಲಿ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಿತು. 2009ರಲ್ಲಿ ಉಕ್ರೇನ್‌ನ ಸುಮಿಯಲ್ಲಿ ತನ್ನ ಪ್ರಮುಖ ಔಷಧ ತಯಾರಿಕಾ ಘಟಕವನ್ನು ಆರಂಭಿಸಿತು.

ಇದನ್ನೂ ಓದಿ:

400 ಕೋಟಿ ನಷ್ಟ

ಭಾರತೀಯ ಮೂಲದ ರಾಜೀವ್ ಗುಪ್ತಾ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, 50ಕ್ಕೂ ಹೆಚ್ಚು ಔಷಧ ಉತ್ಪನ್ನಗಳನ್ನು ತಯಾರಿಸುತ್ತಿದೆ. ಉಕ್ರೇನ್ ಸೇರಿದಂತೆ ಉಜ್ಬೇಕಿಸ್ತಾನ, ಕಜಕಿಸ್ತಾನ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕವೂ ಸುಮಿಯ ಘಟಕ ಕಾರ್ಯಾಚರಣೆ ಮುಂದುವರಿಸಿತ್ತು. ಇದೀಗ ದಾಳಿಯಿಂದ ಕನಿಷ್ಠ 400 ಕೋಟಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಯುದ್ಧ ತೀವ್ರಗೊಳಿಸುತ್ತಿರುವ ಡ್ರೋನ್ ದಾಳಿಗಳು

ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಉಕ್ರೇನ್‌ನ ವಿವಿಧ ಪ್ರದೇಶಗಳ ಮೇಲೆ ವೇಗದ ಶಾಹೆದ್ ಡ್ರೋನ್‌ಗಳ ಮೂಲಕ ದಾಳಿ ತೀವ್ರಗೊಳಿಸಿದೆ. ಕಡಿಮೆ ವೆಚ್ಚದ ಈ ಡ್ರೋನ್‌ಗಳ ಭಾರಿ ಬಳಕೆ ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಗೆ ಸವಾಲಾಗಿದೆ. ಮತ್ತೊಂದೆಡೆ, ಉಕ್ರೇನ್ ಕೂಡ ತನ್ನದೇ ನಿರ್ಮಿತ ಎಫ್‌ಪಿ-7 ಬ್ಯಾಲಿಸ್ಟಿಕ್ ಕ್ಷಿಪಣಿಯ ಯುದ್ಧ ಬಳಕೆಯನ್ನು ಘೋಷಿಸಿದೆ.

Must Read