ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಭಾರತದಲ್ಲಿ ಹೊಸ ವಾಹನ ಖರೀದಿಸಿದಾಗ ಪೂಜೆ ಮಾಡುವುದು ಒಂದು ಪರಂಪರೆ. ಆದರೆ ಇದೇ ರೀತಿಯ ಆಚರಣೆ ವಿದೇಶದಲ್ಲಿ ಕಾಣಿಸಿಕೊಂಡಿರುವುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ರೆಡ್ ಬುಲ್ ಎಫ್1 ಕಾರಿಗೆ ವಿದೇಶಿ ಮಹಿಳೆಯೊಬ್ಬರು ಭಾರತೀಯ ಶೈಲಿಯಲ್ಲಿ ಪೂಜೆ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ.

ಈ ದೃಶ್ಯದಲ್ಲಿ ಮಹಿಳೆ ಕಾರಿಗೆ ಅರಿಶಿಣ-ಕುಂಕುಮ ತಿಲಕವಿಟ್ಟು, ಲಿಂಬೆಹಣ್ಣು ಹಾಗೂ ಹಸಿರು ಮೆಣಸಿನಕಾಯಿ ಕಟ್ಟಿ ದೃಷ್ಟಿ ತಡೆಯುವ ಪದ್ಧತಿ ಅನುಸರಿಸಿದ್ದಾಳೆ. ನಂತರ ಹೂಮಾಲೆ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ನೆರವೇರಿಸಿರುವುದು ಗಮನಸೆಳೆದಿದೆ. ಈ ವಿಡಿಯೋವನ್ನು ಉದ್ಯಮಿ ಎಜೆ ಲಾಲ್ವಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಎಫ್1 ಕಾರಿಗೆ ಪೂಜೆ ಇದೇ ಮೊದಲು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. “ರೆಡ್ ಬುಲ್ ರೆಕ್ಕೆ ನೀಡಿದರೆ, ಲಿಂಬೆ-ಮೆಣಸಿನಕಾಯಿ ಅದನ್ನು ಕಾಪಾಡುತ್ತದೆ” ಎಂದು ಕೆಲವರು ಹಾಸ್ಯ ಮಾಡಿದ್ದಾರೆ. ಮಹಿಳೆಯ ತೆಂಗಿನಕಾಯಿ ಒಡೆಯುವ ಶೈಲಿಗೂ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕಾರು ಬ್ರಿಟಿಷ್ ರೇಸರ್ ಅರ್ವಿದ್ ಆನಂದ್ ಅವರದ್ದಾಗಿದ್ದು, ಅವರಿಗೆ ಭಾರತೀಯ ಮೂಲದ ಸಂಪರ್ಕವಿದೆ ಎನ್ನಲಾಗಿದೆ. ಈ ಘಟನೆ ಭಾರತೀಯ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಹೇಗೆ ಹರಡುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.



