September 19, 2026
Saturday, September 19, 2026
spot_img

ಹೇಜಲ್‌ವುಡ್ ಔಟ್? ಕಮ್ಮಿನ್ಸ್ ಡೌಟ್! ಐಪಿಎಲ್ ಆರಂಭಕ್ಕೂ ಮುನ್ನವೇ ‘ಗಾಯ’ದ ಮೇಲೆ ಬರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆದರೆ, ಈ ಬಾರಿ ಮೈದಾನಕ್ಕಿಳಿಯುವ ಮೊದಲೇ ಪ್ರಮುಖ ಫ್ರಾಂಚೈಸಿಗಳಿಗೆ ಆಘಾತ ಎದುರಾಗಿದೆ. ತಂಡದ ಬೆನ್ನೆಲುಬಾಗಿದ್ದ ಸ್ಟಾರ್ ವೇಗಿಗಳು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ತಂಡಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಕಳೆದ ಬಾರಿ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಈ ಬಾರಿ ಆಡುವುದು ಅನುಮಾನ ಎನ್ನಲಾಗಿದೆ. ಇದು ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಕಳೆದ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ಆಶಸ್ ಸರಣಿಯ ವೇಳೆ ಗಾಯಗೊಂಡಿದ್ದರು. ಅವರು ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿರುವುದರಿಂದ, ಸನ್‌ರೈಸರ್ಸ್ ಹೈದರಾಬಾದ್ ಮ್ಯಾನೇಜ್‌ಮೆಂಟ್ ಈಗ ಇಶಾನ್ ಕಿಶನ್ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಮಥಿಶಾ ಪತಿರಾನ ಗಾಯದಿಂದಾಗಿ ಈ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಕೂಡ ಲಭ್ಯವಿಲ್ಲದ ಕಾರಣ, ಕೆಕೆಆರ್ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಸರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಇಂಜುರಿ ಕಾಟ ಶುರುವಾಗಿದೆ. ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದು, ಈ ಬಾರಿಯ ಐಪಿಎಲ್‌ನಿಂದ ಅವರು ಬಹುತೇಕ ಹೊರಬಿದ್ದಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್ ಎಲಿಸ್ ಅಲಭ್ಯತೆ ಧೋನಿ ಪಡೆಗೆ ದೊಡ್ಡ ಆಘಾತ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !