ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಟ ಚಿರಂಜೀವಿ ಸಮಾಜಸೇವೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಚಿರಂಜೀವಿ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ನಡೆಸಿ ಸಾವಿರಾರು ಜನರಿಗೆ ನೆರವಾಗುತ್ತಿದ್ದಾರೆ. ಇದೀಗ ಅವರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಯೋಜನೆ ರೂಪಿಸಿದ್ದಾರೆ. ಈ ನಿರ್ಧಾರಕ್ಕೆ ತಮಿಳಿನ ನಟ ಸೂರ್ಯ ನಡೆಸುತ್ತಿರುವ ‘ಅಗರಂ’ ಸಂಸ್ಥೆ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷವೆಂದರೆ, ಹಿಂದೆ ಸೂರ್ಯ ಅವರು ಚಿರಂಜೀವಿಯ ರಕ್ತದಾನ ಕಾರ್ಯಗಳಿಂದ ಸ್ಪೂರ್ತಿ ಪಡೆದು ತಮ್ಮ ಸಂಸ್ಥೆ ಆರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಈಗ ಚಿರಂಜೀವಿ ಅವರು ಸೂರ್ಯನ ಶಿಕ್ಷಣ ಸೇವೆಯನ್ನು ನೋಡಿ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಇದನ್ನೂ ಓದಿ:
ಈ ಯೋಜನೆ ತೆಲುಗು ರಾಜ್ಯಗಳಿಗೆ ಮಾತ್ರ ಸೀಮಿತವಾಗದೇ, ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ. ಬಡತನದಿಂದ ಓದಲು ಸಾಧ್ಯವಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ.
‘ರಕ್ತದಾನ ಜೀವ ಉಳಿಸುತ್ತದೆ, ಆದರೆ ಶಿಕ್ಷಣ ಒಂದು ಕುಟುಂಬದ ಭವಿಷ್ಯವನ್ನೇ ಬದಲಿಸುತ್ತದೆ’ ಎಂದು ಚಿರಂಜೀವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಹಾಗೂ ಗಣ್ಯರಿಂದ ಪ್ರಶಂಸೆ ವ್ಯಕ್ತವಾಗಿದೆ.



