March 22, 2026
Sunday, March 22, 2026
spot_img

ಇಸ್ರೇಲ್-ಅಮೆರಿಕನ್ ದಾಳಿಗೆ ಗಡಗಡ ನಡುಗುತ್ತಿದೆ ಇರಾನ್: ಕ್ಷಿಪಣಿ ದಾಳಿಯಲ್ಲಿ ಮತ್ತೊಬ್ಬ ನಾಯಕನ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್-ಅಮೆರಿಕನ್ ದಾಳಿ ಇರಾನ್‌ನಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ. ಇರಾನ್ ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪ್ರಮುಖ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಐಆರ್‌ಜಿಸಿ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ.

ಬ್ರಿಗೇಡಿಯರ್ ಜನರಲ್ ಹುದ್ದೆಯಲ್ಲಿದ್ದ ನೈನಿ, ಐಆರ್‌ಜಿಸಿ ಸಂವಹನ ಮತ್ತು ಮನೋವೈಜ್ಞಾನಿಕ ಯುದ್ಧ ವಿಭಾಗದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಸಂಸ್ಥೆಯ ಅಧಿಕೃತ ಹೇಳಿಕೆಗಳು ಹಾಗೂ ಮಾಹಿತಿ ಬಿಡುಗಡೆಗೂ ಮುನ್ನ ಅವರ ಅನುಮೋದನೆ ಅಗತ್ಯವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಸಾವಿಗೆ ಕೆಲವೇ ಗಂಟೆಗಳ ಮುನ್ನ ನೀಡಿದ ಸಂದರ್ಶನದಲ್ಲಿ, ಅವರು ಇರಾನ್ ತನ್ನ ಕ್ಷಿಪಣಿ ಸಾಮರ್ಥ್ಯದಲ್ಲಿ ಯಾವುದೇ ಕೊರತೆ ಇಲ್ಲದೆ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಪರ್ಷಿಯನ್ ಕೊಲ್ಲಿಗೆ ಶತ್ರುಗಳು ತಮ್ಮ ಶಕ್ತಿ ತೋರಿಸಲಿ ಎಂದು ಅವರು ಸವಾಲು ಹಾಕಿದ್ದರು.

ಇದನ್ನೂ ಓದಿ:

ಇತ್ತೀಚಿನ ದಿನಗಳಲ್ಲಿ ನೈನಿ ಹಲವಾರು ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕನಿಷ್ಠ ಆರು ತಿಂಗಳ ತೀವ್ರ ಯುದ್ಧವನ್ನು ಇರಾನ್ ಎದುರಿಸಬಲ್ಲದು ಎಂದು ಹೇಳಿದ್ದಾರೆ. ಈಗಾಗಲೇ ಹಳೆಯ ತಲೆಮಾರಿನ ಕ್ಷಿಪಣಿಗಳನ್ನು ಮಾತ್ರ ಬಳಸಲಾಗಿದ್ದು, ಇನ್ನೂ ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂಬುದನ್ನೂ ಅವರು ಸೂಚಿಸಿದ್ದರು.

ಅವರ ಹೇಳಿಕೆಗಳು ಇರಾನ್ ತನ್ನ ಸೈನಿಕ ಶಕ್ತಿಯನ್ನು ಬಲವಾಗಿ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಸೂಚಿಸುತ್ತವೆ. ನೈನಿ ಅವರ ಸಾವಿನಿಂದ ಐಆರ್‌ಜಿಸಿ ಪ್ರಮುಖ ಧ್ವನಿಯನ್ನು ಕಳೆದುಕೊಂಡಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !