ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಹಾಗೂ ಚೀನಾ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಶ್ವೇತಭವನದಲ್ಲಿ ಹೊಸ ತಿರುವು ಸಿಕ್ಕಿದೆ. ಗುರುವಾರ ನಡೆದ ಹೈ-ಪ್ರೊಫೈಲ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾಗಿದ್ದು, ಜಾಗತಿಕವಾಗಿ ತಲ್ಲಣ ಮೂಡಿಸುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸುರಕ್ಷತೆಯೇ ಈ ಸಭೆಯ ಕೇಂದ್ರಬಿಂದುವಾಗಿತ್ತು.
‘ಮನುಷ್ಯನ ಕಂಟ್ರೋಲ್‌ನಲ್ಲಿರಲಿ ಎಐ’
ವೇಗವಾಗಿ ಬೆಳೆಯುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ಅಮೆರಿಕ ಮತ್ತು ಚೀನಾ ಎರಡೂ ಎಐ ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸುತ್ತಿವೆ. ತಂತ್ರಜ್ಞಾನವು ಯಾವಾಗಲೂ ಮನುಷ್ಯನ ಹಿಡಿತದಲ್ಲೇ ಇರುವಂತೆ ಹಾಗೂ ಅದು ಸಾರ್ವಜನಿಕ ಕಲ್ಯಾಣಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಜಾಗತಿಕ ಕರೆ ನೀಡಿದರು. ಆದರೆ ಅಧ್ಯಕ್ಷ ಟ್ರಂಪ್ ಅವರು ತಂತ್ರಜ್ಞಾನಕ್ಕೆ ಕಠಿಣ ನಿಯಂತ್ರಣ ಹೇರುವುದನ್ನು ವಿರೋಧಿಸಿದ್ದು, ಚೀನಾಕ್ಕಿಂತ ಅಮೆರಿಕ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ನಿಲುವು ತಳೆದಿದ್ದಾರೆ.
ವ್ಯಾಪಾರ ಯುದ್ಧಕ್ಕೆ ತಾತ್ಕಾಲಿಕ ವಿರಾಮ
ಈ ಶೃಂಗಸಭೆಯ ಅತ್ಯಂತ ಮಹತ್ವದ ಹಾಗೂ ಸ್ಪಷ್ಟ ಫಲಿತಾಂಶವೆಂದರೆ, ಉಭಯ ದೇಶಗಳ ನಡುವಿನ ವ್ಯಾಪಾರ ಕದನ ವಿರಾಮವನ್ನು ವಿಸ್ತರಿಸಲಾಗಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನೀಡಿರುವ ಮಾಹಿತಿಯ ಪ್ರಕಾರ, ಉಭಯ ದೇಶಗಳ ಆರ್ಥಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಈ ಒಪ್ಪಂದವನ್ನು 2027ರ ಜನವರಿ 10ರವರೆಗೆ ವಿಸ್ತರಿಸಲಾಗಿದ್ದು, ಇದು ಜಾಗತಿಕ ಮಾರುಕಟ್ಟೆಗೆ ತಾತ್ಕಾಲಿಕ ನೆಮ್ಮದಿ ತಂದಿದೆ.
ತೈವಾನ್ ಮತ್ತು ಇರಾನ್ ಸಂಘರ್ಷದ ಬಿಸಿ
ಚೀನಾವು ತೈವಾನ್ ದೇಶವನ್ನು ತನ್ನದೇ ಭಾಗ ಎಂದು ವಾದಿಸುತ್ತಿದೆ, ಆದರೆ ಅಮೆರಿಕ ತೈವಾನ್‌ಗೆ ರಹಸ್ಯವಾಗಿ ಬೆಂಬಲ ನೀಡುತ್ತಾ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. ಈ ಸಭೆಯಲ್ಲಿ ಜಿನ್‌ಪಿಂಗ್ ಅವರು, ಅಮೆರಿಕವು ತೈವಾನ್ ಸ್ವಾತಂತ್ರ್ಯವನ್ನು ಬಹಿರಂಗವಾಗಿ ವಿರೋಧಿಸಬೇಕು ಎಂದು ಟ್ರಂಪ್‌ಗೆ ಖಡಕ್ ಆಗಿ ತಿಳಿಸಲು ಮತ್ತು ಭವಿಷ್ಯದಲ್ಲಿ ಉಭಯ ದೇಶಗಳ ಮಿಲಿಟರಿ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗದಂತೆ ತಡೆಯಲು ಈ ವಿಷಯ ಚರ್ಚಿಸಿದ್ದಾರೆ. ಇದೇ ವೇಳೆ ಇರಾನ್ ಮತ್ತು ಇಸ್ರೇಲ್ ನಡುವಿನ ಮಹಾಯುದ್ಧದ ಪರಿಸ್ಥಿತಿಯ ಬಗ್ಗೆಯೂ ಚರ್ಚೆಯಾಗಿದ್ದು, ಶಾಂತಿಯುತ ಸಂಧಾನಕ್ಕೆ ಚೀನಾ ಒತ್ತು ನೀಡಿದೆ.
ಚೀನಾ ಅದ್ಯಕ್ಷರಿಗೆ ಶ್ವೇತಭವನದ ರೆಡ್ ಕಾರ್ಪೇಟ್‌ನಲ್ಲಿ ಭವ್ಯ ಸ್ವಾಗತ ಕೋರಿದ ಟ್ರಂಪ್ ಬಳಿಕ ಔತಣಕೂಟವನ್ನು ಆಯೋಜಿಸಿದ್ದರು. ಇದರ ನಡುವೆ ನಡೆದ ಈ ಮಹತ್ವದ ಸಭೆಯು ಉಭಯ ದೇಶಗಳ ಮಿಲಿಟರಿ ನಡುವೆ ನಿರಂತರ ಸಂಪರ್ಕ ಸಾಧಿಸಲು ಮತ್ತು ಭವಿಷ್ಯದ ಜಾಗತಿಕ ಬಿಕ್ಕಟ್ಟುಗಳನ್ನು ತಪ್ಪಿಸಲು ಹೊಸ ಆಶಾಕಿರಣ ಮೂಡಿಸಿದೆ.



