ಹೊಸದಿಗಂತ ಡಿಜಿಟಲ್ ಡೆಸ್ಕ್;
ಶಾಂತಿ ಮತ್ತು ಸೌಹಾರ್ದತೆಯ ಸುಳಿವೇ ಇಲ್ಲದಂತೆ ಕಂಗೆಟ್ಟಿರುವ ವಾಯುವ್ಯ ಪಾಕಿಸ್ತಾನದಲ್ಲಿ ಉಗ್ರರ ಕ್ರೌರ್ಯ ಮತ್ತೊಮ್ಮೆ ಮಿತಿಮೀರಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಭೀಕರ ಆತ್ಮಹುತಿ ಬಾಂಬ್ ದಾಳಿ ನಡೆದಿದ್ದು, ಇಡೀ ಪ್ರದೇಶವೇ ಶವಗಳ ರಾಶಿಯಾಗಿ ಮಾರ್ಪಟ್ಟಿದೆ. ರಸ್ತೆಬದಿಯ ಪೊಲೀಸ್ ತಪಾಸಣಾ ಕೇಂದ್ರವನ್ನೇ ಗುರಿಯಾಗಿಸಿಕೊಂಡು ನಡೆದ ಈ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಜನರು ದಾರುಣವಾಗಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾಮಾನ್ಯ ದಿನದಂತೆ ತಪಾಸಣೆ ನಡೆಯುತ್ತಿದ್ದ ರಸ್ತೆಬದಿಯ ಪೊಲೀಸ್ ಚೆಕ್‌ಪೋಸ್ಟ್ ಬಳಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ತುಂಬಿದ್ದ ವಾಹನವೊಂದು ವೇಗವಾಗಿ ಬಂದು ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ಸಂಭವಿಸಿದ ಸ್ಫೋಟದ ರಭಸಕ್ಕೆ ಇಡೀ ಚೆಕ್‌ಪೋಸ್ಟ್ ಧೂಳಿಪಟವಾಗಿದ್ದು, ಸುತ್ತಮುತ್ತಲ ಪ್ರದೇಶ ದಟ್ಟ ಹೊಗೆಯಿಂದ ಆವರಿಸಲ್ಪಟ್ಟಿತು. ಸ್ಥಳದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಫೋಟದ ತೀವ್ರತೆಗೆ ಚೆಕ್‌ಪೋಸ್ಟ್‌ನಲ್ಲಿದ್ದ ಬಲಿಪಶುಗಳ ದೇಹಗಳು ಛಿದ್ರಛಿದ್ರಗೊಂಡು ಬಿದ್ದಿದ್ದವು. ಸಾವನ್ನಪ್ಪಿದ 11 ಮಂದಿಯಲ್ಲಿ ಅಬಕಾರಿ ಮತ್ತು ಸುಂಕ ಇಲಾಖೆಯ ಇಬ್ಬರು ಉನ್ನತ ಅಧಿಕಾರಿಗಳು ಸಹ ಸೇರಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ದೃಢಪಡಿಸಿದ್ದಾರೆ.
ಈ ಭೀಕರ ಹಾಗೂ ಅಮಾನವೀಯ ದಾಳಿಯ ಹೊಣೆಯನ್ನು ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ನಿಷೇಧಿತ ‘ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್’ ಉಗ್ರ ಸಂಘಟನೆ ತನ್ನದಾಗಿಸಿಕೊಂಡಿದೆ. ಘಟನೆಯ ಬೆನ್ನಲ್ಲೇ ಆತಂಕಗೊಂಡಿರುವ ಸ್ಥಳೀಯ ಆಡಳಿತ, ಇಡೀ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಿದೆ. ಸ್ಥಳಕ್ಕೆ ಧಾವಿಸಿರುವ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಜ್ಞರು, ದಾಳಿಗೆ ಬಳಸಲಾದ ಸ್ಫೋಟಕಗಳ ತೀವ್ರತೆ ಹಾಗೂ ಸ್ವರೂಪವನ್ನು ಪತ್ತೆಹಚ್ಚಲು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.
ಘಟನಾ ಸ್ಥಳದಲ್ಲಿದ್ದ ರಕ್ಷಣಾ ಪಡೆಯ ಸಿಬ್ಬಂದಿ ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ 30 ಮಂದಿಯಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀಕರ ಸಾಧ್ಯತೆಯನ್ನು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.



