March 23, 2026
Monday, March 23, 2026
spot_img

ಬಿಸಿಸಿಐ ಪವರ್‌ಗೆ ಬೆಚ್ಚಿಬಿದ್ದ ಪಾಕ್: ಆಟಗಾರರಿಲ್ಲದೆ ಸೊರಗುತ್ತಿದೆ ಪಾಕಿಸ್ತಾನ ಸೂಪರ್ ಲೀಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಜೊತೆಗೇ ಪೈಪೋಟಿ ನಡೆಸಿ ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈಗ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ. ವಿಶ್ವದ ಶ್ರೀಮಂತ ಲೀಗ್ ಐಪಿಎಲ್‌ನ ಸೆಳೆತಕ್ಕೆ ಸಿಲುಕಿ ವಿದೇಶಿ ಆಟಗಾರರು ಸಾಲು ಸಾಲಾಗಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ.

ಶ್ರೀಲಂಕಾ ಟಿ20 ತಂಡದ ನಾಯಕ ದಸುನ್ ಶನಕ ಪಿಎಸ್‌ಎಲ್‌ನ ಲಾಹೋರ್ ಖಲಂದರ್ಸ್‌ ತಂಡದ ಪರ ಆಡಬೇಕಿತ್ತು. ಅವರನ್ನು 7.5 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಖರೀದಿಸಲಾಗಿತ್ತು. ಆದರೆ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ರಾಜಸ್ಥಾನ ತಂಡವು ಶನಕ ಅವರಿಗೆ ಗಾಳ ಹಾಕಿದ್ದು, ಭರ್ಜರಿ ಮೊತ್ತದ ಆಫರ್ ನೀಡಿದೆ ಎನ್ನಲಾಗಿದೆ. ಹೀಗಾಗಿ ಶನಕ ಪಿಎಸ್‌ಎಲ್ ಕೈಬಿಟ್ಟು ಭಾರತಕ್ಕೆ ಬರಲು ಸಜ್ಜಾಗಿದ್ದಾರೆ.

ಕೇವಲ ಶನಕ ಮಾತ್ರವಲ್ಲ, ಈಗಾಗಲೇ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್‌ಎಲ್ ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಂಡಿದ್ದಾರೆ. ಇವರ ಬೆನ್ನಲ್ಲೇ ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಸಾಧ್ಯತೆ ದಟ್ಟವಾಗಿದೆ.

ತನ್ನ ಲೀಗ್‌ನಿಂದ ಆಟಗಾರರು ಹೊರನಡೆಯುತ್ತಿರುವುದನ್ನು ಕಂಡು ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, “ಹೀಗೆ ಅರ್ಧದಲ್ಲೇ ಹೋದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಲೀಗ್‌ನಿಂದ ಬ್ಯಾನ್ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದೆ. ಆದರೆ, ಐಪಿಎಲ್‌ನಲ್ಲಿ ಸಿಗುವ ಹಣ ಮತ್ತು ಖ್ಯಾತಿಯ ಮುಂದೆ ಪಾಕಿಸ್ತಾನದ ಬೆದರಿಕೆಗೆ ಆಟಗಾರರು ಸೊಪ್ಪು ಹಾಕುತ್ತಿಲ್ಲ.

ಮಾರ್ಚ್ 26 ರಂದು ಪಿಎಸ್‌ಎಲ್ ಆರಂಭವಾದರೆ, ಮಾರ್ಚ್ 28 ರಿಂದ ಐಪಿಎಲ್ ಹಬ್ಬ ಶುರುವಾಗಲಿದೆ. ಆದರೆ ಆರಂಭಕ್ಕೂ ಮುನ್ನವೇ ಐಪಿಎಲ್ ಅಬ್ಬರಕ್ಕೆ ಪಿಎಸ್‌ಎಲ್ ಅಸ್ತಿತ್ವವೇ ಅಲ್ಲಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !