November 16, 2026
Monday, November 16, 2026
spot_img

ಸಚಿನ್ ಜೊತೆ ಬ್ಯಾಟ್ ಹಿಡಿದ ಬ್ರಿಟನ್ ರಾಜಕುಮಾರಿ: ಮುಂಬೈನ ‘ಕಟಿಂಗ್ ಚಾಯ್’ಗೆ ಮನಸೋತ ರಾಜದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಸಾರ್ವಜನಿಕ ಜೀವನದಲ್ಲಿ ಮತ್ತೆ ಸಕ್ರಿಯರಾಗಿರುವ ಬ್ರಿಟನ್ ರಾಜಕುಮಾರಿ ಕೇಟ್ ಮಿಡ್ಲ್‌ಟನ್ ಅವರು ಪತಿ ಪ್ರಿನ್ಸ್ ವಿಲಿಯಂ ಅವರೊಂದಿಗೆ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಸೋಮವಾರ ಮುಂಬೈಗೆ ಆಗಮಿಸಿದ ರಾಜದಂಪತಿಯನ್ನು ಸಾಂಪ್ರದಾಯಿಕ ಡೋಲು-ವಾದ್ಯಗಳ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮುಂಬೈ ಪ್ರವಾಸದ ವೇಳೆ ರಾಜದಂಪತಿ ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಅನುಭವಿಸಿದರು. ಬೃಹತ್ ಆಲದ ಮರದ ಕೆಳಗಿರುವ ಚಹಾ ಅಂಗಡಿಗೆ ಭೇಟಿ ನೀಡಿದ ಅವರು, ಮಣ್ಣಿನ ಕುಲ್ಹಡ್‌ಗಳಲ್ಲಿ ನೀಡಲಾದ ಪ್ರಸಿದ್ಧ ‘ಕಟಿಂಗ್ ಚಾಯ್’ ಸವಿದರು. ಈ ಭೇಟಿಯ ಕಾರ್ಯಕ್ರಮದ ವಿವರಗಳನ್ನು ಗೌಪ್ಯವಾಗಿಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೂ ಆಗಮಿಸಲಿರುವ ಗಣ್ಯರ ಬಗ್ಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.

‘ಅರ್ಥ್‌ಶಾಟ್ ಪ್ರಶಸ್ತಿ’ ಪ್ರದಾನ ಸಮಾರಂಭ

ಮಂಗಳವಾರ ನಡೆಯಲಿರುವ ವಾರ್ಷಿಕ ‘ಅರ್ಥ್‌ಶಾಟ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ವಿಲಿಯಂ ಮತ್ತು ಕೇಟ್ ಭಾಗವಹಿಸಲಿದ್ದಾರೆ. 2020ರಲ್ಲಿ ಪ್ರಿನ್ಸ್ ವಿಲಿಯಂ ಸ್ಥಾಪಿಸಿದ ಈ ಉಪಕ್ರಮವು ಹವಾಮಾನ ಬದಲಾವಣೆಗೆ ಪರಿಹಾರ ಕಂಡುಕೊಳ್ಳುವ ನವೀನ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ. ಐವರು ವಿಜೇತರಿಗೆ ತಲಾ 10 ಲಕ್ಷ ಪೌಂಡ್ ಬಹುಮಾನ ನೀಡಲಾಗುತ್ತದೆ. ಅರ್ಥ್‌ಶಾಟ್ ಪ್ರಶಸ್ತಿ ಸ್ಥಾಪನೆಯಾದ ಬಳಿಕ ನಡೆಯುತ್ತಿರುವ ಅತಿದೊಡ್ಡ ಸಮಾರಂಭ ಇದಾಗುವ ನಿರೀಕ್ಷೆಯಿದೆ.

ಹಲವು ಗಣ್ಯರ ಭಾಗಿ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಟಿ ಆಲಿಯಾ ಭಟ್ ಹಾಗೂ ನಟ ರಾಮಿ ಮಲೇಕ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಟನ್‌ನ ಜನಪ್ರಿಯ ಸಂಗೀತ ತಂಡ ‘ಟೇಕ್ ದಟ್’ ಕೂಡ ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಲಿದೆ.

ಕ್ರಿಕೆಟ್ ಜೊತೆ ರಾಜಮನೆತನದ ಹಳೆಯ ನಂಟು

ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ರಾಜದಂಪತಿಯ ವಿಶೇಷ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಸಚಿನ್ ಅವರು ಪ್ರವಾಸಿಗರ ಗಮನಕ್ಕೆ ಸಾಮಾನ್ಯವಾಗಿ ಬಾರದ ಮುಂಬೈನ ಕೆಲವು ವಿಶೇಷ ಸ್ಥಳಗಳನ್ನು ಪರಿಚಯಿಸಿದರು. ವಿಲಿಯಂ ಮತ್ತು ಕೇಟ್‌ಗೆ ಮುಂಬೈ ಹಾಗೂ ಕ್ರಿಕೆಟ್ ನಡುವಿನ ನಂಟು ಹೊಸದೇನಲ್ಲ. 2016ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದ ಈ ದಂಪತಿ, ಸ್ಥಳೀಯ ಮಕ್ಕಳೊಂದಿಗೆ ಬೀದಿ ಕ್ರಿಕೆಟ್ ಆಡಿದ್ದರು. ಇದೀಗ ಸುಮಾರು ಒಂದು ದಶಕದ ಬಳಿಕ ಮತ್ತೆ ಮುಂಬೈನಲ್ಲಿ ಕ್ರಿಕೆಟ್ ಮೂಲಕ ಗಮನ ಸೆಳೆದಿದ್ದು, ಈ ಬಾರಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಅವರೊಂದಿಗೆ ಇದ್ದರು.

ಕಳೆದ ಆರು ವರ್ಷಗಳಲ್ಲಿ ಅರ್ಥ್‌ಶಾಟ್ ಉಪಕ್ರಮಕ್ಕೆ ಭಾರತ ಮಹತ್ವದ ಕೊಡುಗೆ ನೀಡಿದೆ. ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯ ಅಂತಿಮ ಸುತ್ತಿನ ಸ್ಪರ್ಧಿಗಳು ಮತ್ತು ವಿಜೇತರನ್ನು ಭಾರತ ಹೊಂದಿದೆ ಎಂದು ಪ್ರಿನ್ಸ್ ವಿಲಿಯಂ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ಕ್ರಿಕೆಟ್, ಫ್ಯಾಷನ್ ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ರಾಜದಂಪತಿ ನವದೆಹಲಿಗೆ ತೆರಳಲಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಕಾರ್ಯಕ್ರಮವೂ ನಿಗದಿಯಾಗಿದೆ. ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಾಗಲೂ ದಂಪತಿ ಮೋದಿ ಅವರನ್ನು ಭೇಟಿಯಾಗಿದ್ದರು.

Must Read

Skip to toolbar