ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಗಾಯಕ ಬಾದ್‌ಶಾ ಅವರ ಇತ್ತೀಚೆಗೆ ರಿಲೀಸ್ ಆಗಿದ್ದ ಹೊಸ ಹಾಡು ಟಟೀರಿ ವಿವಾದದಲ್ಲಿ ಸಿಲುಕಿಗೊಂಡಿದ್ದು, ಹೀಗಾಗಿ ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿನ 857 ಲಿಂಕ್ ಗಳಿಗೆ ಗೇಟ್ ಪಾಸ್ ನೀಡಿದ್ದಾರೆ.
ಟಟೀರಿ ಹಾಡು ಮಹಿಳೆಯ ಕುರಿತು ಅಸಭ್ಯ ಸಾಹಿತ್ಯದಿಂದ ಕೂಡಿದೆ ಎಬ ಆರೋಪ ಕೇಳಿಬಂದ ಹಿನ್ನೆಲೆ ಹರಿಯಾಣ ಪೊಲೀಸರು ಹಾಡಿನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಯೂಟ್ಯೂಬ್‌ನ 154 ವಿಡಿಯೋ ಗಳು ಹಾಗು ಇನ್ಸ್ಟಾಗ್ರಾಮ್ ನಿಂದ 703 ರೀಲ್ಸ್ ಸೇರಿ 857 ಲಿಂಕ್ ಗಳನ್ನು ತೆಗೆದುಹಾಕಲು ಸೂಚಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹರಿಯಾಣ ಪೊಲೀಸ್ ಮಹಾನಿರ್ದೇಶಕ ಅಜಯ್ ಸಿಂಘಾಲ್, ಕಾನೂನು ನಿಯಮ ಉಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಒಂದು ವೇಳೆ ಮತ್ತೆ ಮತ್ತೆ ಪ್ರಕಟಿಸಿದರೆ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಈ ಸಂಬಂಧ ಹರಿಯಾಣದ ಪಂಚಕುಲ ನಗರದ ಸೆಕ್ಟರ್ 20 ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಹಾಡಿನ ವಿವಾದ ಶುರುವಾದ ಬೆನ್ನಿಗೆ ರಾಷ್ಟ್ರೀಯ ಮಹಿಳಾ ಆಯೋಗವು ಬಾದ್‌ಶಾ ಹಾಗು ನಿರ್ಮಾಪಕರಿಗೆ ಸಮನ್ಸ್ ನೀಡಿತ್ತು. ಇದಾದ ಬಳಿಕ ಕ್ಷಮೆಯಾಚಿಸಿದ ಅವರು, ಸಾಮಾಜಿಕ ಮಾಧ್ಯಮಗಳಿಂದ ಹಾಡುಗಳನ್ನು ತೆಗೆದಿದ್ದರು.



