March 24, 2026
Tuesday, March 24, 2026
spot_img

ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು: ಆರೋಪಿ ಅರೆಸ್ಟ್

ಹೊಸದಿಗಂತ ವರದಿ, ಬನವಾಸಿ:

ಕೊಲೆಗೆ ಯತ್ನಿಸಿ ಹಲ್ಲೆಗೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಸಮೀಪದ ಯಡಗೊಪ್ಪ ಗ್ರಾಮದ ಹನುಮವ್ವ ಶಿವಶಂಕರ್ ಕುರುಬರ(55) ಕೊಲೆಯಾದ ದುರ್ದೈವಿಯಾಗಿದ್ದಾಳೆ.

ಇತ್ತೀಚೆಗೆ ಯಡಗೊಪ್ಪ ಗ್ರಾಮದ ಹನುಮವ್ವ ಶಿವಶಂಕರ್ ಕುರುಬರ ಎಂಬ ಮಹಿಳೆ ಕಾಣೆಯಾಗಿದ್ದು, ಬಳಿಕ ನರೂರು ಗ್ರಾಮದ ಪ್ರಕಾಶ ಗೌಡ ಎಂಬುವವರ ಜಮೀನಿನಲ್ಲಿರುವ ಹಲಸಿನ ಮರದ ಕೆಳಗೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಗಾಯಾಳುವನ್ನು ವಿಚಾರಿಸಿದಾಗ, ಅಲ್ಪಸ್ವಲ್ಪ ಮಾತನಾಡುತ್ತ ನರೂರು ಗ್ರಾಮದ ಕೃಷ್ಣಮೂರ್ತಿ ಆಚಾರಿ ಹೊಡೆದು ಕೊಲೆಗೆ ಯತ್ನಿಸಿ ಗಾಯಗೊಳಿಸಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣ ಆಕೆಯನ್ನು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಕೊಲೆ ಮಾಡುವ ಉದ್ದೇಶದಿಂದ ಬಲವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಯಡಗೊಪ್ಪದ ಸಂಜೀವ ಶಿವಶಂಕರ್ ಕುರುಬರ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಪರಾರಿಯಾಗಿದ್ದ ಆರೋಪಿ ಸಮೀಪದ ನರೂರು ಗ್ರಾಮದ ಕೃಷ್ಣಮೂರ್ತಿ ಹಿರಿಯಣ್ಣ ಆಚಾರಿ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಮಾಹಿತಿ ಏನೆಂಬುದು ಸ್ಪಷ್ಟವಾಗಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದೆ.

ಆರೋಪಿಯು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾನೆ. ಈ ಕೊಲೆಯು ಹಿಂದೆ ಯಾರೆಲ್ಲ ಇದ್ದಾರೆ ಎಂದು ತಿಳಿಯಬೇಕಾಗಿದ್ದು ವಿಕೃತಿ ಮೆರೆದು ಅಮಾನವೀಯ ರೀತಿಯಲ್ಲಿ ಕೊಲೆಗೈದಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !