ಹೊಸದಿಗಂತ ವರದಿ ಕಲಬುರಗಿ:
ಹಲವು ದಿನಗಳಿಂದ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಕಲಬುರಗಿ ನಗರದಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಜನರಿಗೆ ನೆಮ್ಮದಿ ತಂದಿದೆ.
ಮಧ್ಯಾಹ್ನ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಬಳಿಕ ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳು ತಂಪಿನಿಂದ ಕಂಗೊಳಿಸಿದವು. ಮಳೆಯ ಪರಿಣಾಮ ತಾಪಮಾನದಲ್ಲಿ ಇಳಿಕೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ನಾಗರಿಕರು ನಿರಾಳರಾಗಿದ್ದಾರೆ.
ಇದನ್ನೂ ಓದಿ:
ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸ್ವಲ್ಪ ಸಮಯ ಸಂಚಾರದಲ್ಲಿ ತೊಂದರೆ ಅನುಭವಿಸಿದರೂ, ರೈತರು ಹಾಗೂ ಸಾರ್ವಜನಿಕರು ಮಳೆಯನ್ನು ಸ್ವಾಗತಿಸಿದರು. ನಗರದ ವಿವಿಧ ಭಾಗಗಳಲ್ಲಿ ಮಕ್ಕಳು ಮಳೆಯಲ್ಲಿ ಆಟವಾಡಿ ಸಂಭ್ರಮಿಸಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮಳೆ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹವಾಮಾನ ಇಲಾಖೆ ಮುಂಬರುವ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.



