ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂದು ವಾರದಿಂದ ದೇಶದ ಹಲವೆಡೆ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಹವಾಮಾನ ಇಲಾಖೆ ಇಂದು ಮತ್ತು ನಾಳೆ ಸೇರಿ ಸುಮಾರು 22 ರಾಜ್ಯಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲೂ ಆಲಿಕಲ್ಲು ಮಳೆ ದಾಖಲಾಗಿದ್ದು, ಜನಜೀವನದಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ.
ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಛತ್ತೀಸ್‌ಗಢ, ಆಂಧ್ರಪ್ರದೇಶ, ಕರ್ನಾಟಕದ ಮಲೆನಾಡು ಭಾಗ, ತೆಲಂಗಾಣ ಹಾಗೂ ವಿದರ್ಭ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಪಶ್ಚಿಮ ರಾಜಸ್ಥಾನದಲ್ಲೂ ಹವಾಮಾನ ಬದಲಾವಣೆ ಕಂಡುಬರಲಿದೆ. ಮಾರ್ಚ್ 28ರವರೆಗೆ ಕರಾವಳಿ ಕರ್ನಾಟಕ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಉತ್ತರ ಭಾರತದಲ್ಲೂ ಹವಾಮಾನ ಅಸ್ಥಿರವಾಗಿದ್ದು, ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಾರ್ಚ್ 27ರವರೆಗೆ ಮಳೆ ಮತ್ತು ಹಿಮಪಾತ ಸಂಭವಿಸಬಹುದು.
ಇದೇ ವೇಳೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾರ್ಚ್ 29ರವರೆಗೆ ವ್ಯಾಪಕ ಮಳೆಯ ಸಾಧ್ಯತೆ ಇದೆ. ವಾಯುವ್ಯ ಭಾರತದಲ್ಲಿ ಮುಂದಿನ ಎರಡು ದಿನಗಳಲ್ಲಿ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.



