ಹೊಸದಿಗಂತ ಡಿಜಿಟಲ್ ಡೆಸ್ಕ್:
ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಹೊರವಲಯ ತೊಕ್ಕೊಟ್ಟು ಫ್ಲೈ ಓವರಲ್ಲಿ ಇಂದು ಮುಂಜಾನೆ ನಡೆದಿದೆ.
ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (46) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದ ರೌಡಿಶೀಟರ್.
ಮೃತ ಆರೀಫ್ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಆರೀಫ್ ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದು ಇಂದು ಬೆಳಿಗ್ಗೆ ಬುಲೆಟಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಆತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕಾರಿನಿಂದ ಹಿಂಬಾಲಿಸಿದ ತಂಡವೊಂದು ಆರೀಫನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಕಳೆದ 2022 ರ ಮೇ ತಿಂಗಳಲ್ಲಿ ಆರೀಫ್ ಇದೇ ರೀತಿ ಬೆಳಿಗ್ಗೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲ್ನ ಟೊಪ್ಪಿ ನೌಫಾಲ್ ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.
ವಿವಾಹಿತನಾಗಿರುವ ಆರೀಫ್ ಮೂಲತ: ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಆರೇಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ , ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದನಂತೆ. ಮೃತ ಆರೀಫ್ ಗೆ ಪತ್ನಿ ಮೂರು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.



