ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಹಾಕ್ತೀನಿ ಎಂದು ಬೆದರಿಕೆ ಇ-ಮೇಲ್ ಕಳಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ.
ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆಯ ಆರನೇ ಕ್ರಾಸ್‌ನಲ್ಲಿದ್ದ ಆರೋಪಿ ಶ್ರೀನಿವಾಸ್‌ನನ್ನು ಬಂಧಿಸಲಾಗಿದೆ. ಈತ ಒಂದೇ ತಿಂಗಳಿನಲ್ಲಿ ಅನೇಕ ಬಾರಿ ಬೆದರಿಕೆ ಸಂದೇಶ ಕಳಿಸಿ ಜನರಲ್ಲಿ ಗಾಬರಿ ಉಂಟು ಮಾಡಿದ್ದ.
ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು.
ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಗುತ್ತಿದ್ದು, ಈ ಹಿಂದೆ ಕಳುಹಿಸಿದ ಎಲ್ಲಾ ಬೆದರಿಕೆ ಸಂದೇಶಗಳ ಹಿನ್ನಲೆ ಹಾಗೂ ಉದ್ದೇಶಗಳ ಬಗ್ಗೆ ವಿಚಾರಣೆ ಮುಂದುವರಿಯಲಿದೆ.



