ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಮರ್ ಖಾಲಿದ್ ನನ್ನು ‘ರಾಷ್ಟ್ರವಾದಿ’ ಎಂದು ಹೊಗಳಿ, ಎಬಿವಿಪಿ ವಿರುದ್ಧ ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಹಿಂದೂ ಪರ ಹೋರಾಟಗಾರ ತೇಜಸ್ ಗೌಡ ಅವರು ದೂರು ನೀಡಿದ್ದು, ಹರಿಪ್ರಸಾದ್ ಅವರ ಹೇಳಿಕೆಗಳು ಸಮಾಜದಲ್ಲಿ ದ್ವೇಷ ಹಾಗೂ ವೈಮನಸ್ಸಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.
ಎಬಿವಿಪಿ ವಿರೋಧ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯಲ್ಲಿ ಉಮರ್ ಖಾಲಿದ್ ಕುರಿತು ‘Prisoner No. 626710 is Present’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಸೆ.14ರಂದು ನಿಗದಿಯಾಗಿದ್ದ ಪ್ರದರ್ಶನವನ್ನು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ಆಯೋಜಕರು ಮುಂದೂಡಿದ್ದರು.
ಉಮರ್ ಖಾಲಿದ್ ರಾಷ್ಟ್ರವಾದಿ
ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಹೇಳಿ, ಎಬಿವಿಪಿ ಅವರ ಬಗ್ಗೆ ಮಾತನಾಡೋ ಅಧಿಕಾರವೇನಿದೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತೇಜಸ್ ಗೌಡ, ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದೀಗ ದೂರಿನ ಕುರಿತು ಪೊಲೀಸರು ಪರಿಶೀಲನೆ ನಡೆಸಿ, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಸಾಕ್ಷ್ಯಚಿತ್ರ ಪ್ರದರ್ಶನದ ವಿಚಾರವೂ ರಾಜಕೀಯ ಹಾಗೂ ವಿದ್ಯಾರ್ಥಿ ಸಂಘಟನೆಗಳ ನಡುವೆ ಚರ್ಚೆಗೆ ಕಾರಣವಾಗಿದೆ.



