ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಗ್ರಾಮೀಣ ಗುಡ್ಡಗಾಡು ಪ್ರದೇಶವಾದ ಕಾಚಿನಬಟ್ಟಿಯಲ್ಲಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ ಬೃಹತ್ ಕಾಳಿಂಗ ಸರ್ಪವೊಂದನ್ನು ಉರಗರಕ್ಷಕ ಮಹೇಶ ನಾಯ್ಕ ಅವರ ತಂಡ ಅತ್ಯಂತ ಪ್ರಯಾಸದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.
ಕಾಚಿಬಟ್ಟಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ವಾಹನವೊಂದು ಬಡಿದ ಕಾರಣ ಕಾಳಿಂಗ ಸರ್ಪ ರಸ್ತೆ ಪಕ್ಕದಲ್ಲಿರುವ ಕೃಷಿಕ ರಾಜು ನಾಯಕ ಎನ್ನುವವರ ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿ ಮಲಗಿದ್ದರಿಂದ ಭೀತಿಗೊಂಡ ಮನೆಯವರು ಹೊಸಕಂಬಿ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಇಲಾಖೆಯವರು ಉರಗರಕ್ಷಕ ಮಹೇಶ ನಾಯ್ಕ ಅವರಿಗೆ ಕರೆ ಮಾಡಿ ಸಹಕಾರ ಕೋರಿದ್ದರು.
ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಮತ್ತು ಅವರ ಮಗ ಗಗನ ನಾಯ್ಕ ಕಾಳಿಂಗ ಸರ್ಪವನ್ನು ಅಡುಗೆ ಮನೆಯಿಂದ ಹೊರಗೆ ತರುವ ಪ್ರಯತ್ನದಲ್ಲಿದ್ದಾಗ ಸರ್ಪ ಪಕ್ಕದಲ್ಲಿರುವ ಬಿಲವೊಂದರಲ್ಲಿ ಸೇರಿಕೊಂಡಿದ್ದು ಆತಂಕಕ್ಕೆ ಕಾರಣವಾಯಿತು.
ಸ್ಥಳೀಯ ಸಹಕಾರದಲ್ಲಿ ಬಿಲವನ್ನು ಅಗೆಯುವ ಕೆಲಸ ನಡೆಸಲಾದರೂ ಬಿಲ ಆಗೆದಷ್ಟು ಆಳಕ್ಕೆ ಹೋಗುತ್ತಿರುವುದು ಕಾಳಿಂಗ ಸರ್ಪವನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು ಬಿಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಟ್ಟು ಸುಮಾರು ಮೂರು ತಾಸುಗಳಿಂತ ಹೆಚ್ಚಿನ ಸಮಯ ಕಾರ್ಯಾಚರಣೆ ನಡೆಸಿದ ನಂತರ ಕಾಳಿಂಗ ಸರ್ಪ ಬಿಲದಿಂದ ಹೊರಗೆ ಬಂದಿದ್ದು ಭಾರೀ ಗಾತ್ರದ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ಕಾರ್ಯಾಚರಣೆಗೆ ಮಹೇಶ ನಾಯ್ಕ ಅವರ ಸಂಬಂಧಿ ಅನುಷಾ,ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಸಿದ್ಧಲಿಂಗ,ಹರ್ಷ ನಾಯ್ಕ್, ಶಿವರಾಜ ನಾಯ್ಕ, ಚಂದ್ರಕಾಂತ, ಕಾಚಿನಬಟ್ಟಿ ಸುತ್ತ ಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು.



