September 2, 2026
Wednesday, September 2, 2026
spot_img

ಮಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಖಾಕಿ ಸರ್ಜಿಕಲ್ ಸ್ಟ್ರೈಕ್: 11 ಮಂದಿ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆಗಾಗಿ ಮಂಗಳೂರು ಪೊಲೀಸರು ನಡೆಸುತ್ತಿರುವ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ. ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 11 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಎರಡು ಪ್ರತ್ಯೇಕ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದ್ದು, ಒಂದು ಕಡೆಯಿಂದ ಮೂವರು ಹಾಗೂ ಇನ್ನೊಂದು ಕಡೆಯಿಂದ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ, ತನಿಖೆ ಪೂರ್ಣಗೊಂಡ ಬಳಿಕ ಸಮಗ್ರ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಶದಲ್ಲಿರುವ ಇವರೆಲ್ಲರೂ ಬಾಂಗ್ಲಾ ನಿವಾಸಿಗಳಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:

ಖಚಿತ ಮಾಹಿತಿಯ ಮೇರೆಗೆ ಉರ್ವಾ ಪೊಲೀಸ್ ಠಾಣೆ ಸಿಬ್ಬಂದಿ ಕುಂಟಿಕಾನದಲ್ಲಿನ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದ್ದು, ಈ ವೇಳೆ ಮೂವರು ಬಾಂಗ್ಲಾದೇಶ ಮೂಲದ ವ್ಯಕ್ತಿಗಳು ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಕೋಡಿಕಲ್ ಪ್ರದೇಶದ ಮತ್ತೊಂದು ನಿರ್ಮಾಣ ಸ್ಥಳದಲ್ಲಿ ಎಂಟು ಮಂದಿ ಶಂಕಿತ ವಲಸಿಗರನ್ನು ಪತ್ತೆಹಚ್ಚಿದ್ದು, ಅವರ ಗುರುತಿನ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆಯೂ ಸುರತ್ಕಲ್‌ನಲ್ಲಿ ಎಂಟು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿದೇಶಿ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಈ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !