ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕುಗಳ ಮೇಲೆ ಅಮೆರಿಕ ಶೇ.20 ಶುಲ್ಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಜಲಸಂಧಿಯ ಭದ್ರತೆಯನ್ನು ಅಮೆರಿಕವೇ ನೋಡಿಕೊಳ್ಳುತ್ತಿರುವುದರಿಂದ ಅದರ ವೆಚ್ಚಕ್ಕೆ ಪರಿಹಾರವಾಗಿ ಈ ಶುಲ್ಕ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘ಹಾರ್ಮುಜ್‌ನ ರಕ್ಷಕ ಅಮೆರಿಕ’ ಎಂದ ಟ್ರಂಪ್
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿ ಎಲ್ಲ ರಾಷ್ಟ್ರಗಳಿಗೂ ಮುಕ್ತವಾಗಿಯೇ ಮುಂದುವರಿಯಲಿದೆ. ಆದರೆ ಇರಾನ್ ಹಡಗುಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದ್ದು, ಭದ್ರತಾ ವ್ಯವಸ್ಥೆಗಾಗಿ ಸಾಗಣೆ ಸರಕುಗಳ ಮೇಲೆ 20% ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕ ಈ ಜಲಮಾರ್ಗದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:
ಇರಾನ್ ತೀವ್ರ ವಿರೋಧ
ಟ್ರಂಪ್ ಘೋಷಣೆಗೆ ತಕ್ಷಣ ಪ್ರತಿಕ್ರಿಯಿಸಿದ ಇರಾನ್, ಹಾರ್ಮುಜ್ ಜಲಸಂಧಿಯ ನಿರ್ವಹಣೆಯಲ್ಲಿ ಅಮೆರಿಕದ ಯಾವುದೇ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕದೊಂದಿಗೆ ಈ ವಿಚಾರದಲ್ಲಿ ಸಹಕರಿಸುವ ರಾಷ್ಟ್ರಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಇರಾನ್ ಎಚ್ಚರಿಕೆ ನೀಡಿದೆ.
ಜಾಗತಿಕ ವ್ಯಾಪಾರಕ್ಕೆ ಪರಿಣಾಮದ ಆತಂಕ
ಹಾರ್ಮುಜ್ ಜಲಸಂಧಿ ಮೂಲಕ ವಿಶ್ವದ ಸುಮಾರು ಐದನೇ ಒಂದು ಭಾಗದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆ ನಡೆಯುತ್ತದೆ. ಅಮೆರಿಕ–ಇರಾನ್ ನಡುವಿನ ಹೊಸ ಬೆಳವಣಿಗೆ ಜಾಗತಿಕ ಇಂಧನ ಮಾರುಕಟ್ಟೆ, ತೈಲ ಬೆಲೆ ಹಾಗೂ ಸಮುದ್ರ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.



