ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ದಿನ ತನಗೆ ಊಟ ನೀಡುತ್ತಿದ್ದ ಅಜ್ಜಿ ಕೊನೆಯುಸಿರೆಳೆದಾಗ ಕೋತಿಯೊಂದು ಬಿಕ್ಕಿ ಬಿಕ್ಕಿ ಅತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ. ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಎಂಬವರ ಸಾವಿಗೆ ಕಪಿರಾಯ ಕಣ್ಣೀರು ಹಾಕಿದ್ದಾನೆ.
ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನು ಪಾರ್ವತಮ್ಮ ಅವರು ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋದನ ವ್ಯಕ್ತಪಡಿಸಿದೆ.
ಮೃತದೇಹದ ಮೇಲೆ ಮಲಗಿದ ಕೋತಿ ಬಿಕ್ಕಿ ಬಿಕ್ಕಿ ಅತ್ತಿದೆ. ಇದನ್ನು ನೋಡಿದ ಜನರೂ ಅತ್ತಿದ್ದಾರೆ. ಕೋತಿ ಹಾಗೂ ಅಜ್ಜಿಯ ಬಾಂಧವ್ಯವನ್ನು ಕಂಡು ಮರುಗಿದ್ದಾರೆ.



