ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಹಮ್ಮಿಕೊಳ್ಳಲಾಗಿದ್ದ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಮೊದಲ ದಿನವೇ ಶೇಕಡ 93.4 ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರು ಮಾಹಿತಿ ನೀಡಿದ್ದಾರೆ. ಒಟ್ಟು 273 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 85 ವರ್ಷ ಮೇಲ್ಪಟ್ಟ 183 ಹಿರಿಯರು ಹಾಗೂ 90 ವಿಶೇಷ ಚೇತನರು ಸೇರಿದ್ದರು. ಈ ಪೈಕಿ ಮೊದಲ ದಿನವೇ 168 ಹಿರಿಯ ನಾಗರಿಕರು ಮತ್ತು 87 ವಿಶೇಷ ಚೇತನರು ಸೇರಿದಂತೆ ಒಟ್ಟು 255 ಮಂದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಈ ವಿಶೇಷ ವ್ಯವಸ್ಥೆಯು ಅಶಕ್ತ ಮತದಾರರಿಗೆ ಸುಲಭವಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.



