ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಜೋರಿನ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹಾಸ್ಯಭರಿತ ಮಾತುಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಇನ್‌ಸೈಡರ್ ದ್ಯಾನಿಶ್ ಸೇಠ್ (ನಾಗ್ಸ್) ಜೊತೆ ಕೊಹ್ಲಿ ಕಾಣಿಸಿಕೊಂಡ ಯೂಟ್ಯೂಬ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸುಮಾರು ಐದು ನಿಮಿಷಗಳ ಈ ಮನರಂಜನಾ ವಿಡಿಯೋದಲ್ಲಿ, ಆರ್‌ಸಿಬಿ ಮಾಲೀಕತ್ವ ಬದಲಾವಣೆ, ತಂಡದ ವಾತಾವರಣ ಮತ್ತು ಭವಿಷ್ಯದ ಬಗ್ಗೆ ಇಬ್ಬರೂ ಹಾಸ್ಯಮಯವಾಗಿ ಮಾತುಕತೆ ನಡೆಸಿದ್ದಾರೆ. ಎಂದಿನಂತೆ ನಾಗ್ಸ್ ಅವರ ಕಾಮಿಡಿ ಟೈಮಿಂಗ್‌ಗೆ ಕೊಹ್ಲಿಯೂ ಅದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ವಿಡಿಯೋ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ.
ಇದನ್ನೂ ಓದಿ:
ಮಾತುಕತೆಯ ವೇಳೆ ಕೊಹ್ಲಿ, “ಕಂಪನಿ ಯಾವುದು ಬಂದರೂ ನಾಗ್ಸ್ ಇದ್ದೇ ಇರುತ್ತಾರೆ. ನೀವು ಮತ್ತು ಜಿರಳೆ ಮಾತ್ರ ಎಲ್ಲ ಕಡೆ ಉಳಿಯಬಹುದು” ಎಂದು ಹಾಸ್ಯ ಮಾಡಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನಾಗ್ಸ್, “ನಿಮಗೆ ಅಭದ್ರತಾ ಭಾವ ಇದ್ದರೆ ಹೇಳಿ, ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ” ಎಂದು ಫನ್ ಮಾಡಿದರು.
ಇದಕ್ಕೆ ಕೌಂಟರ್ ನೀಡಿದ ಕೊಹ್ಲಿ, “ನನಗೆ ಯಾವುದೇ ಟೆನ್ಷನ್ ಇಲ್ಲ. ಎಲ್ಲೂ ಆಗದಿದ್ದರೆ ನಿಮ್ಮ ಇನ್‌ಫ್ಲ್ಯುಯೆನ್ಸ್ ಬಳಸಿ ನಾನು ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಬಹುದು. ನೀವು ಇಲ್ಲಿ ದೊಡ್ಡ ಸ್ಟಾರ್ ಅಲ್ವಾ? ನಾನು ಸೈಡ್ ರೋಲ್ ಮಾಡ್ತೀನಿ” ಎಂದು ಹೇಳಿ ನಗುವಿನ ಹೊನಲು ಹರಿಸಿದರು.
ಕೊಹ್ಲಿಯ ಈ ಸ್ಯಾಂಡಲ್‌ವುಡ್ ಕಾಮೆಂಟ್ ಈಗ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಕಿಂಗ್ ಕೊಹ್ಲಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ?” ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.



