ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ವಜಾಗೊಂಡಿರುವ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಆಮ್ ಆದ್ಮಿ ಪಾರ್ಟಿ ಮಾಡಿದ ಆರೋಪಗಳು ಶುದ್ಧ ಸುಳ್ಳು ಎಂದು ಚಡ್ಡಾ ಹೇಳಿದ್ದಾರೆ.
ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಕುರಿತು ಪ್ರತಿಪಕ್ಷಗಳ ಸಭಾತ್ಯಾಗದಲ್ಲಿ ಭಾಗವಹಿಸಿಲ್ಲ. ಪಕ್ಷದ ನಿರ್ಧಾರಗಳಿಗೆ ಬೆಲೆ ನೀಡುವುದಿಲ್ಲ ಎಂದು ದೂರಿದ್ದರು.
ಸೌರಭ್ ಆರೋಪಕ್ಕೆ ತಿರುಗೇಟು ನೀಡಿದ ಚಡ್ಡಾ, ನಾನು ಕಲಾಪಕ್ಕೆ ತೆರಳುವುದು ಸಾರ್ವಜನಿಕ ಸಮಸ್ಯೆಗಳನ್ನು ಎತ್ತಲು ಹೊರತು ಗದ್ದಲ ನಡೆಸಲು ಅಲ್ಲ. ಆಪ್ ಆರೋಪಗಳು ಶುದ್ಧ ಸುಳ್ಳು ಎಂದು ಟೀಕಿಸಿದ್ದಾರೆ.
ಸಭಾತ್ಯಾಗಕ್ಕೆ ಸಾಥ್ ನೀಡುವುದಿಲ್ಲ ಎಂಬ ಆರೋಪಕ್ಕೂ ಸವಾಲು ಹಾಕಿದ ಅವರು, ಒಂದೇ ಒಂದು ಪ್ರಕರಣ ಉಲ್ಲೇಖಿಸಿ, ಕಲಾಪಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದು ಗುಡುಗಿದರು.
ಇದೇ ವೇಳೆ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸುತ್ತಾರೆ ಎಂಬ ಆರೋಪಕ್ಕೂ ಉತ್ತರ ನೀಡಿದ ಅವರು, ಈ ಕುರಿತು ಯಾವುದೇ ಪಕ್ಷದ ನಾಯಕರು ನನ್ನ ಭೇಟಿಯಾಗಿಲ್ಲ. ಜೊತೆಗೆ ನನ್ನದೇ ಪಕ್ಷದ ಹಲವು ಸಂಸದರು ಸಹಿಯೇ ಹಾಕಿಲ್ಲ ಎಂದು ತಿಳಿಸಿದರು.
ಜನರು ಕಷ್ಟಪಟ್ಟು ನೀಡಿದ ತೆರಿಗೆ ಹಣದಲ್ಲಿ ನಡೆಯುವ ಸಂಸತ್ ನಲ್ಲಿ ನಾನು ಜನರ ಸಮಸ್ಯೆಯನ್ನು ಎತ್ತಿ ತೋರಿಸುವುದು ನನ್ನ ಕರ್ತವ್ಯ. ಅಲ್ಲಿ ಗದ್ದಲ ಸೃಷ್ಟಿಸುವುದು ನನ್ನ ಕೆಲಸವಲ್ಲ ಎಂದು ಅಸಮಾಧಾನ ಹೊರಹಾಕಿದರು.



