ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಒಂದು ಭಾರೀ ಸಂಚಲನ ಮೂಡಿಸಿದೆ.
ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 35 ವರ್ಷದ ರಾಹುಲ್ ಚೌಧರಿ ಮೇಲೆ ಮೋದಿನಗರದ ಡಾಬಾ ಬಳಿ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರೂ, ರಾಹುಲ್ ಸ್ವತಃ ಕಾರು ಚಲಾಯಿಸಿಕೊಂಡೇ ಸುಮಾರು 25 ಕಿಲೋಮೀಟರ್ ದೂರದ ಆಸ್ಪತ್ರೆಗೆ ತಲುಪಿರುವುದು ಅಚ್ಚರಿಯ ಸಂಗತಿ.
ಗುರುವಾರ ರಾತ್ರಿ ಸುಮಾರು 9.30ರ ವೇಳೆಗೆ NH-58 ಸಮೀಪದ ಸೀಕ್ರಿ ಕಲಾನ್ ಪ್ರದೇಶದ ಸ್ವಾಗತ್ ಡಾಬಾ ಹೊರಗೆ ಈ ದಾಳಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಮೊದಲು ಸ್ಕೂಟರ್ನಲ್ಲಿ ಬಂದಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಅಲ್ಲೇ ನಿಂತಿರುವುದು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಾಹುಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಮತ್ತೊಬ್ಬ ವ್ಯಕ್ತಿ ಎಸ್ಯುವಿ ಬಳಿ ಬಂದು ಮತ್ತೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ದಾಳಿಯಲ್ಲಿ ರಾಹುಲ್ ಅವರ ಕುತ್ತಿಗೆ, ಎದೆ, ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಂಭೀರ ಗಾಯಗಳಾಗಿವೆ. ಆದರೂ ಆತಂಕಕ್ಕೆ ಒಳಗಾಗದೆ ಅವರು ತಾವೇ ಕಾರು ಚಲಾಯಿಸಿಕೊಂಡು ಸಂಜಯ್ ನಗರದ ಖಾಸಗಿ ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಪ್ರಕರಣದ ತನಿಖೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿಯ ಹಿಂದಿನ ಕಾರಣ ಮತ್ತು ಆರೋಪಿಗಳ ಗುರುತು ಪತ್ತೆ ಮಾಡಲು ಶೋಧ ಕಾರ್ಯ ಮುಂದುವರಿದಿದೆ.



